ಗದಗ, ಎ. ೧೮ : ದೈನಂದಿನ ಬದುಕಿನಲ್ಲಿ ಜೀವನವನ್ನು ಸಾರ್ಥಕತೆ ಮಾಡಿಕೊಳ್ಳುವ ಸನ್ಮಾರ್ಗವನ್ನು ತೋರಿಸುವ, ಜೀವನವನ್ನು ಸಾಗಿಸುವ ಹಾಗೂ ಅರ್ಥೈಯಿಸುವ ದಾರ್ಶನಿಕ ಚಿಂತನೆಯುಳ್ಳ ಈ ’ಜೀವನ ದರ್ಶನ’ ಮಾಲಿಕೆಯು ಎಲ್ಲರ ಬದುಕಿಗೆ ಬೆಳಕಾಗಲಿ ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರ ಸಂಸ್ಥಾನಮಠದ ಪೂಜ್ಯ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ಗದುಗಿನ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯಿಂದ ಜರುಗಿದ ೫೭ನೇ ’ಜೀವನ ದರ್ಶನ’ ಪ್ರವಚನ ಮಾಲಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಸತ್ಯ, ಧರ್ಮ, ಶಾಂತಿ ಮತ್ತು ಮೋಕ್ಷದಂತಹ ಜೀವನದ ಮೂಲ ತತ್ವಗಳನ್ನು ಸಾದರಪಡಿಸಿ ಹುಟ್ಟು ಸಾವಿನ ಮದ್ಯದ ಜೀವನವನ್ನು ಸತ್ಕಾರ್ಯಗಳ ಮೂಲಕ ಸಾರ್ಥಕ ಮಾಡಿಕೊಳ್ಳಬೇಕು ಅಂತಹ ಕಾರ್ಯಕ್ಕೆ ಈ ಜೀವನ ದರ್ಶನ ಪ್ರವಚನ ಮಾಲಿಕೆ ಮುನ್ನುಡಿಯಾಗಲಿ ಎಂದರು.
ಗದುಗಿನ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನ ಬಹಳಷ್ಟು ಚೊಕ್ಕಟ ಹಾಗೂ ಸುಂದರವಾಗಿ ವಿನ್ಯಾಸಗೊಳಿಸಿದ್ದು ಇಲ್ಲಿನ ಸಾಂಸ್ಕೃತಿಕ ಭವನ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಕಲ ಮಂಗಲ ಕಾರ್ಯಗಳಿಗೆ ಸದುಪಯೋಗ ಆಗುತ್ತಿರುವದು ಸಧ್ಯದ ಹಾಗೂ ಹಿಂದಿನ ಸಮಿತಿಯ ಎಲ್ಲ ಪದಾಧಿಕಾರಿಗಳ ಪರಿಶ್ರಮದ ಫಲವಾಗಿದೆ ಎಂದ ಸ್ವಾಮೀಜಿ ೬೦ ನೇ ಜೀವನ ದರ್ಶನ ಪ್ರವಚನ ಮಾಲಿಕೆ ವಿಶಿಷ್ಠ ರೀತಿಯಲ್ಲಿ ಆಚರಿಸುವಂತಾಗಲು ಇಂದಿನಿಂದಲೇ ಯೋಜನೆ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎ.ಟಿ.ನರೇಗಲ್ಲ ಅವರು ಪ್ರತಿ ತಿಂಗಳು ಅಮವಾಸ್ಯೆ ಜರಗುತ್ತಿರುವ ಬಂದ ಜೀವನ ದರ್ಶನ ಪ್ರವಚನ ಮಾಲಿಕೆ ಕಾರ್ಯಕ್ರಮವು ಜನರ ಬದುಕಿನಲ್ಲಿ ಧರ್ಮ, ವೈಚಾರಿಕ ಜಾಗೃತಿಯನ್ನು ಮೂಡಿಸುತ್ತ ಎಲ್ಲರೂ ಸನ್ಮಾರ್ಗದೆಡೆಗೆ ಮುನ್ನಡೆಯಲು ಪ್ರೇರೆಪಿಸುತ್ತಿದೆ ಎಂದರು.
ಗದಗ-ಬೆಟಗೇರಿ ನಗರಸಭೆಯ ಮಾಜಿ ಉಪಾಧ್ಯಕ್ಷ ಶಂಕರ ಹಾನಗಲ್ಲ ಅವರು ಮಾತನಾಡಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯು ಈ ಭಾಗದಲ್ಲಿ ಸಮಾಜಮುಖಿ, ಜನಮುಖಿಯಾಗಿ ಕಾರ್ಯ ಮಾಡುತ್ತಿದೆ. ಧಾರ್ಮಿಕ, ವೈಚಾರಿಕ, ಶೈಕ್ಷಣಿಕ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿರುವದು ಅಭಿನಂದನೀಯ. ಇದುವರೆಗೆ ಸಮಿತಿಯ ಎಲ್ಲ ಪದಾಧಿಕಾರಿಗಳು ಒಳ್ಳೆ ಕಾರ್ಯ ಮಾಡಿಕೊಂಡು ಬಂದಿದ್ದಾರೆ ಎಂದು ಬಣ್ಣಿಸಿದರು.
ಪ್ರಸಾದ ಸೇವೆಯನ್ನು ವಹಿಸಿಕೊಂಡಿದ್ದ ಗದಗ-ಬೆಟಗೇರಿ ನಗರಸಭೆಯ ಮಾಜಿ ಉಪಾಧ್ಯಕ್ಷ ಶಂಕರ ಹಾನಗಲ್ಲ, ಸೋಲಾರ ಪ್ರೋಜೆಕ್ಟನ್ ಚೀಪ್ ಮ್ಯಾನೇಜರ್ ಟಿ.ಕಲ್ಯಾಣ ಚಕ್ರವರ್ತಿ, ಹುಲಕೋಟಿಯ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ಬಿ.ವ್ಹಿ.ಪಾಟೀಲ ಅವರನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.
ಈರನಗೌಡ ಮಣಕವಾಡ, ಸಂಕೇತ ಮಸನಿ ಹಾಗೂ ವಿಠ್ಠಲ ಹೂಗಾರ ಅವರಿಂದ ಸಂಗೀತ ಜರುಗಿತು. ಕಸ್ತೂರಿ ಕಮ್ಮಾರ ಪ್ರಾರ್ಥಿಸಿದರು, ಸಮಿತಿಯ ಕಾರ್ಯದರ್ಶಿ ಕೆ.ಪಿ.ಗುಳಗೌಡರ ಸ್ವಾಗತಿಸಿದರು, ಸಮಿತಿಯ ಮಾಜಿ ಅಧ್ಯಕ್ಷ ವ್ಹಿ.ಕೆ.ಗುರುಮಠ ನಿರೂಪಿಸಿದರು ಕೊನೆಗೆ ಸಮಿತಿಯ ಕೋಶಾಧ್ಯಕ್ಷ ಎಸ್.ಎಸ್.ಪಾಳೇಗಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಜಿ.ಜಿ.ಕುಲಕರ್ಣಿ, ಉಪಾಧ್ಯಕ್ಷ ಆರ್.ಆರ್.ಕಾಶಪ್ಪನವರ, ಸಹ ಕಾರ್ಯದರ್ಶಿ ಸುದರ್ಶನ ಹಾನಗಲ್, ನಿರ್ದೆಶಕರಾದ ಆರ್.ಬಿ.ಅಂದಪ್ಪನವರ, ವ್ಹಿ.ಆರ್.ಗೊಬ್ಬರಗುಂಪಿ, ಸಾಗರ ಬಿಂಗಿ, ಸಂಗೀತಾ ಕುರಿ ಸೇರಿದಂತೆ ಗಣ್ಯಮಾನ್ಯರು, ಹಿರಿಯರು ಪಾಲ್ಗೋಂಡಿದ್ದರು.


