ವೈದ್ಯರ ನಿರ್ಲಕ್ಷ್ಯ ಆರೋಪ: ದೇವದಾಸಿ ಮಹಿಳೆಗೆ ಮೂರು ಬಾರಿ ಶಸ್ತ್ರಚಿಕಿತ್ಸೆ — ತನಿಖೆ, ₹50 ಲಕ್ಷ ಪರಿಹಾರಕ್ಕೆ ಆಗ್ರಹ

MK HasiruKranti
ವೈದ್ಯರ ನಿರ್ಲಕ್ಷ್ಯ ಆರೋಪ: ದೇವದಾಸಿ ಮಹಿಳೆಗೆ ಮೂರು ಬಾರಿ ಶಸ್ತ್ರಚಿಕಿತ್ಸೆ — ತನಿಖೆ, ₹50 ಲಕ್ಷ ಪರಿಹಾರಕ್ಕೆ ಆಗ್ರಹ
WhatsApp Group Join Now
Telegram Group Join Now
ಬಳ್ಳಾರಿ: 15′..ನಗರದ ಬಿಎಂಸಿ ಆರ್‌ಸಿ ಆಸ್ಪತ್ರೆಗೆ ಸಂಬಂಧಿಸಿದಂತೆ ವೈದ್ಯರ ನಿರ್ಲಕ್ಷ್ಯದಿಂದ ದೇವದಾಸಿ ಮಹಿಳೆಯೊಬ್ಬರಿಗೆ ಅನ್ಯಾಯವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ಪೀಡಿತೆಗೆ ₹50 ಲಕ್ಷ ಪರಿಹಾರ ನೀಡಬೇಕೆಂದು ದೇವದಾಸಿ ಮಹಿಳಾ ಸಂಘದ ಗೌರವಾಧ್ಯಕ್ಷ ಯು. ಬಸವರಾಜ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಳ್ಳಾರಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಂಡೂರು ತಾಲೂಕಿನ ಕೊಂಡಾಪುರ ಗ್ರಾಮದ ಹೆಚ್. ದುರ್ಗಮ್ಮ (43) ಅವರಿಗೆ ನಡೆದ ಚಿಕಿತ್ಸಾ ಪ್ರಕ್ರಿಯೆಯಲ್ಲಿ ತೀವ್ರ ನಿರ್ಲಕ್ಷ್ಯ ನಡೆದಿದೆ ಎಂದು ಆರೋಪಿಸಿದರು.
2025ರ ಆಗಸ್ಟ್ ತಿಂಗಳಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ದುರ್ಗಮ್ಮ ಅವರು ಆಸ್ಪತ್ರೆಗೆ ತೆರಳಿದಾಗ, ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಗರ್ಭಕೋಶ ತೆಗೆದುಹಾಕುವಂತೆ ಸಲಹೆ ನೀಡಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೆ ಶಸ್ತ್ರಚಿಕಿತ್ಸೆಯ ನಂತರ ನಿರಂತರ ಮೂತ್ರ ವಿಸರ್ಜನೆ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಿದರು.
ಪುನಃ ಚಿಕಿತ್ಸೆಗಾಗಿ ತೆರಳಿದಾಗ, ಅವರನ್ನು ಖಾಸಗಿ ಟ್ರಾಮಕೇರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೊದಲ ಶಸ್ತ್ರಚಿಕಿತ್ಸೆ ವೇಳೆ ನರ ಸಂಬಂಧಿತ ಸಮಸ್ಯೆಯನ್ನು ಸರಿಯಾಗಿ ಸರಿಪಡಿಸಲಾಗಿಲ್ಲವೆಂದು ಹೇಳಿ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೂ ಸಮಸ್ಯೆ ಕಡಿಮೆಯಾಗದೆ ಹೊಟ್ಟೆನೋವು ಹೆಚ್ಚಾಗಿದೆ ಎಂದು ವಿವರಿಸಿದರು.
ನಂತರ ಹೊಸಪೇಟೆಯ ಮತ್ತೊಂದು ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷೆಯಲ್ಲಿ ಹೊಟ್ಟೆಯೊಳಗೆ ಶಸ್ತ್ರಚಿಕಿತ್ಸೆ ವೇಳೆ ಬಿಟ್ಟಿದ್ದ ಸ್ಟೀಲ್ ರಿಂಗ್ ಪತ್ತೆಯಾಗಿದೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ಟ್ರಾಮಕೇರ್ ಆಸ್ಪತ್ರೆಯ ಡಾ. ಇಮ್ದಾದ್ ಅಲಿ ಅವರು ತಮ್ಮ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮೂರನೇ ಬಾರಿ ಶಸ್ತ್ರಚಿಕಿತ್ಸೆ ಮಾಡಿ ಸ್ಟೀಲ್ ರಿಂಗ್ ತೆಗೆದಿದ್ದಾರೆ. ಇದಕ್ಕಾಗಿ ₹16,750 ಶುಲ್ಕ ವಸೂಲಿ ಮಾಡಲಾಗಿದೆ ಎಂದು ಆರೋಪಿಸಿದರು.
ಈವರೆಗಿನ ಚಿಕಿತ್ಸೆಗಾಗಿ ಸುಮಾರು ₹3 ಲಕ್ಷ ವೆಚ್ಚವಾಗಿದ್ದು, ದೀರ್ಘಕಾಲದಿಂದ ಮಾನಸಿಕ ಹಾಗೂ ದೈಹಿಕ ಯಾತನೆ ಅನುಭವಿಸುತ್ತಿದ್ದೇನೆ ಎಂದು ದುರ್ಗಮ್ಮ ತಮ್ಮ ಅಳಲು ಹಂಚಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಸ್ಪಷ್ಟವಾಗಿರುವುದರಿಂದ ಸಂಬಂಧಿಸಿದ ವೈದ್ಯರು ಮತ್ತು ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಂಡು, ಸಂಪೂರ್ಣ ತನಿಖೆ ನಡೆಸಬೇಕು. ಜೊತೆಗೆ ಪೀಡಿತೆಗೆ ಸಂಭವಿಸಿದ ಹಾನಿಗೆ ಪರಿಹಾರವಾಗಿ ₹50 ಲಕ್ಷ ನೀಡಬೇಕು ಎಂದು ಯು. ಬಸವರಾಜ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಮಿ, ಎನ್. ಶಂಕಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article