ಕೊರ್ಲಗುಂದಿಯಲ್ಲಿ ಎನ್.ಎಸ್.ಎಸ್ ವಿಶೇಷ ಶಿಬಿರಕ್ಕೆ ಚಾಲನೆ: ವಿದ್ಯಾರ್ಥಿನಿಯರಲ್ಲಿ ಸೇವಾ ಮನೋಭಾವ ಬೆಳೆಸುವ ಸಂಕಲ್ಪ

MK HasiruKranti
ಕೊರ್ಲಗುಂದಿಯಲ್ಲಿ ಎನ್.ಎಸ್.ಎಸ್ ವಿಶೇಷ ಶಿಬಿರಕ್ಕೆ ಚಾಲನೆ: ವಿದ್ಯಾರ್ಥಿನಿಯರಲ್ಲಿ ಸೇವಾ ಮನೋಭಾವ ಬೆಳೆಸುವ ಸಂಕಲ್ಪ
WhatsApp Group Join Now
Telegram Group Join Now
ಬಳ್ಳಾರಿ, ಏ.16:.. ನಗರದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕ 1 ಮತ್ತು ಘಟಕ 2ರ ವತಿಯಿಂದ 2025-26ನೇ ಶೈಕ್ಷಣಿಕ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಏಪ್ರಿಲ್ 15ರಿಂದ 21ರವರೆಗೆ ಕೊರ್ಲಗುಂದಿ ಗ್ರಾಮದಲ್ಲಿ ಆಯೋಜಿಸಲಾಗಿದ್ದು, ಇಂದು ಬುಧವಾರ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯ ನೆರವೇರಿಸಿ, ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಧ್ವಜಾರೋಹಣ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಸ್ವಯಂಸೇವಕಿಯರು ಗೀತೆಯನ್ನು ಸಮೂಹವಾಗಿ ಹಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೂಪಂ ಸತೀಶ ಅವರು ಮಾತನಾಡಿ, “ವಿದ್ಯಾರ್ಥಿನಿಯರು ಎನ್.ಎಸ್.ಎಸ್ ಮೂಲಕ ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಅವರ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ” ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯ ಅವರು ಎನ್.ಎಸ್.ಎಸ್ ಇತಿಹಾಸವನ್ನು ಸ್ಮರಿಸಿ, “1969ರ ಸೆಪ್ಟೆಂಬರ್ 24ರಂದು ಡಾ. ವಿ.ಕೆ.ಆರ್.ವಿ ರಾವ್ ಅವರಿಂದ ರಾಷ್ಟ್ರೀಯ ಸೇವಾ ಯೋಜನೆ ಆರಂಭಗೊಂಡಿತು. ಎನ್.ಎಸ್.ಎಸ್ ಚಿಹ್ನೆಯಲ್ಲಿನ ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳು ಕ್ರಮವಾಗಿ ತ್ಯಾಗ, ಶಾಂತಿ ಹಾಗೂ ಸಮೃದ್ಧಿಯನ್ನು ಪ್ರತಿನಿಧಿಸುತ್ತವೆ. ಈ ಮೌಲ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಜೀವನದಲ್ಲಿ ಅಳವಡಿಸಿಕೊಂಡು ದೇಶ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು” ಎಂದು ಕರೆ ನೀಡಿದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ವಿಜಯೇಂದ್ರ ರಂಗ ಪ್ರಸಾದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎನ್.ಎಸ್.ಎಸ್ ಚಟುವಟಿಕೆಗಳ ಮೂಲಕ ವಿದ್ಯಾರ್ಥಿನಿಯರಲ್ಲಿ ವ್ಯಕ್ತಿತ್ವ ವಿಕಾಸ, ನಾಯಕತ್ವ ಗುಣ, ಹೊಂದಾಣಿಕೆ ಮನೋಭಾವ, ಪ್ರಜಾಸತ್ತಾತ್ಮಕ ಚಿಂತನೆ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕಿ ಡಾ. ಸೈದಾ ಕೆ. ತನ್ವೀರ್, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಜಿ. ಅಶೋಕ, ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿಯರಾದ ಡಾ. ಕೆ. ಅನುಪಮಾ ಮತ್ತು ಕೆ. ಮಮತಾ, ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಬಸವರಾಜೇಶ್ವರಿ ಹೆಚ್, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸುವರ್ಣಮ್ಮ ಡಿ, ಉಪನ್ಯಾಸಕಿ ಡಾ. ಮಂಗಳ ಬಿ.ಎನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎನ್.ಎಸ್.ಎಸ್ ಸ್ವಯಂಸೇವಕಿ ರಾಜೇಶ್ವರಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಚೈತನ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಕಾರ್ಯದರ್ಶಿ ಅನುಷಾ ವಂದಿಸಿದರು.
ಇದಾದ ಬಳಿಕ ಗಣ್ಯರು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಸಂದೇಶ ನೀಡಿದರು. ನಂತರ ವಿದ್ಯಾರ್ಥಿನಿಯರು, ಅಧ್ಯಾಪಕರು ಹಾಗೂ ಎನ್.ಎಸ್.ಎಸ್ ಅಧಿಕಾರಿಗಳು ಕೊರ್ಲಗುಂದಿ ಗ್ರಾಮದಲ್ಲಿ ಜಾಥಾ ನಡೆಸಿ, ಘೋಷಣೆಗಳ ಮೂಲಕ ಶಿಕ್ಷಣದ ಮಹತ್ವ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಸಾಮಾಜಿಕ ಬದ್ಧತೆ ಮತ್ತು ರಾಷ್ಟ್ರಸೇವೆಯ ಮನೋಭಾವವನ್ನು ವಿದ್ಯಾರ್ಥಿನಿಯರಲ್ಲಿ ಬೆಳೆಸುವ ಉದ್ದೇಶದಿಂದ ಆಯೋಜಿಸಿದ ಶಿಬಿರದ ಮೊದಲ ದಿನದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
WhatsApp Group Join Now
Telegram Group Join Now
Share This Article