ಜಮಖಂಡಿ :ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಮ್ಮೆ ಕಳ್ಳತನ ಪ್ರಕರಣವನ್ನು ಬೇಧಿಸಿದ ಪೊಲೀಸರು 6 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗ್ರಾಮೀಣ ಠಾಣೆಯ ಪಿಎಸ್‌ಐ ಗಂಗಾಧರ ಪೂಜಾರಿ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಎಂ.ಎ. ವಾಲೇಕಾರ ಅವರ ನೇತೃತ್ವದ ತಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ಜಂಬಗಿ ರಸ್ತೆಯಲ್ಲಿ ಸಂಶಯಾಸ್ಪದವಾಗಿ ಎರಡು ವಾಹನಗಳಲ್ಲಿ ದನಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದವರನ್ನು ತಡೆದು ವಿಚಾರಣೆ ನಡೆಸಲಾಯಿತು.ಆರಂಭದಲ್ಲಿ ಆರೋಪಿತರು ಸಮರ್ಪಕ ಉತ್ತರ ನೀಡದ ಹಿನ್ನೆಲೆ ಅವರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ, ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಒಂದು ಎಮ್ಮೆ ಹಾಗೂ ಶೂರ್ಪಾಲಿ ಗ್ರಾಮದಲ್ಲಿ ಎರಡು ಎಮ್ಮೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾಹನಗಳನ್ನು ವಶಪಡಿಸಿಕೊಂಡು, 6 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
