ಬಳ್ಳಾರಿ,ಮೇ.21: ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯಗಳಲ್ಲಿ ಗುಣಮಟ್ಟದ, ಪೌಷ್ಟಿಕಾಂಶಯುತ ಆಹಾರ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಇತ್ತೀಚೆಗೆ ಎಐಡಿಎಸ್‌ಓ ಹಾಗೂ ವಿ.ಶ್ರೀ.ಕೃ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.
ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತರಕಾರಿ, ಬೇಳೆ ಇಲ್ಲದ ಸಾಂಬಾರು ಹಾಗೂ ಸಾಂಬಾರಿಗೆ ಅಕ್ಕಿ ಬೇಯಿಸಿದ ನೀರನ್ನು ಬಳಸಲಾಗುತ್ತಿತ್ತು. ಸರಿಯಾಗಿ ತರಕಾರಿ ಹಾಕದ ಪಲ್ಯ, ಜಿಡ್ಡುಗಟ್ಟಿದ ಎಣ್ಣೆಯನ್ನು ಅಡುಗೆಗೆ ಬಳಸಲಾಗುತ್ತಿತ್ತು. ಅಲ್ಲದೆ, ವಾರಕ್ಕೆ ಒಂದು ದಿನವೂ ಚಿಕನ್ ಊಟ ನೀಡುತ್ತಿರಲಿಲ್ಲ. ವಾರದಲ್ಲಿ ಕೇವಲ ಒಂದು ಬಾರಿ ಬಾಳೆಹಣ್ಣು ಮತ್ತು ಮೊಟ್ಟೆಗೆ ಮಾತ್ರ ಆಹಾರ ಸೀಮಿತವಾಗಿತ್ತು. ಇಂತಹ ಅತ್ಯಂತ ಕಳಪೆ ಗುಣಮಟ್ಟದ ಹಾಗೂ ಪೌಷ್ಟಿಕಾಂಶದ ಕೊರತೆಯುಳ್ಳ ಆಹಾರ ಸೇವನೆಯಿಂದಾಗಿ ವಿದ್ಯಾರ್ಥಿಗಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಇದರೊಂದಿಗೆ ವಿದ್ಯಾರ್ಥಿನಿಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಹಾಗೂ ಅಡುಗೆ ಕೋಣೆಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆಯೂ ಎದ್ದು ಕಾಣುತ್ತಿತ್ತು.
ಈ ಎಲ್ಲಾ ಸಮಸ್ಯೆಗಳನ್ನು ವಿರೋಧಿಸಿ ನಡೆಸಿದ ನಿರಂತರ ಹೋರಾಟದ ಫಲವಾಗಿ, ಇಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ವರಿ ಅವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರು. ವಿಶ್ವವಿದ್ಯಾಲಯದ ಕುಲಪತಿಗಳು, ಹಾಸ್ಟೆಲ್ ನಿಲಯ ಪಾಲಕರು ಹಾಗೂ ವಿದ್ಯಾರ್ಥಿಗಳ ಜೊತೆ ಜಂಟಿ ಸಭೆ ನಡೆಸಿ ಈ ಕೆಳಗಿನ ಪ್ರಮುಖ ನಿರ್ಧಾರಗಳನ್ನು ಕೈಗೊಂಡರು.
ಜೂನ್ ಒಂದನೇ ತಾರೀಖಿನಿಂದ ಹಾಸ್ಟೆಲ್‌ನ ಮೆನು ಚಾರ್ಟ್ ಬದಲಾಯಿಸಿ, ಸಮಾಜ ಕಲ್ಯಾಣ ಇಲಾಖೆಯ ನಿಯಮಾವಳಿ ಪ್ರಕಾರ ಉತ್ತಮ ಗುಣಮಟ್ಟದ ಆಹಾರ ಪೂರೈಸಲಾಗುವುದು. ಇನ್ಮುಂದೆ ವಿದ್ಯಾರ್ಥಿಗಳಿಗೆ ವಾರಕ್ಕೆ ಮೂರು ಬಾರಿ ಮೊಟ್ಟೆ ಹಾಗೂ ಒಂದು ದಿನ ಚಿಕನ್ ಊಟ ನೀಡಲು ನಿರ್ಧರಿಸಲಾಗಿದೆ. ವಿಶ್ವವಿದ್ಯಾನಿಲಯದ ಹಾಸ್ಟೆಲ್ ನಿರ್ವಹಣಾ ವ್ಯವಸ್ಥೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ವರ್ಗಾಯಿಸಲು ಕ್ರಮ ವಹಿಸಲಾಗುವುದು. ನೇರವಾಗಿ ಇಲಾಖೆಯೇ ಹಾಸ್ಟೆಲ್ ನಿರ್ವಹಣೆ ವಹಿಸಿಕೊಳ್ಳಲು ಕೆಲ ದಿನಗಳ ಕಾಲಾವಕಾಶ ಕೋರಲಾಗಿದೆ.ಹಾಸ್ಟೆಲ್ ನಿರ್ವಹಣೆ ಮತ್ತು ಗುಣಮಟ್ಟವನ್ನು ಪರಿಶೀಲಿಸಲು ಪ್ರತಿವಾರ ಇಲಾಖೆಯ ಅಧಿಕಾರಿಗಳು ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಿವಿ ವಿದ್ಯಾರ್ಥಿಗಳ ಹೋರಾಟ ಸಮಿತಿಯ ಸಂಚಾಲಕರಾದ ನಿಹಾರಿಕಾ, ಅವರು, “ವಿದ್ಯಾರ್ಥಿಗಳು ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಒಗ್ಗಟ್ಟಿನಿಂದ ಯಾವುದೇ ಅನ್ಯಾಯದ ವಿರುದ್ಧ ಹೋರಾಡಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂಬುದಕ್ಕೆ ಈ ವಿಜಯವೇ ಸಾಕ್ಷಿ” ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಕರೆ ನೀಡಿದರು.
ಈ ಯಶಸ್ವಿ ಹೋರಾಟದ ಸಂದರ್ಭದಲ್ಲಿ ಎಐಡಿಎಸ್‌ಓ ಕಛೇರಿ ಕಾರ್ಯದರ್ಶಿ ನಿಹಾರಿಕಾ, ವಿವಿ ವಿದ್ಯಾರ್ಥಿಗಳ ಹೋರಾಟ ಸಮಿತಿ ಸದಸ್ಯರಾದ ಅರುಣ್ ಭಗತ್, ಹನುಮೇಶ್ ಬನ್ನಿಕೊಪ್ಪ, ಮಂಜುನಾಥ, ಅಮೃತ ಬಿಂದು, ಸತ್ಯ, ಗೋಪಾಲ್, ರಾಘವೇಂದ್ರ ಎನ್., ಆಂಜನೇಯ, ಸುನಿಲ್ ಕುಮಾರ್, ವಿಜಯ, ಕಾರ್ತಿಕ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
