ಧಾರವಾಡ: ಯಾಲಕ್ಕಿ ಶೆಟ್ಟರ ಕಾಲೋನಿಯ ಶಂಕರಮಠದಲ್ಲಿ ಶ್ರೀ ಶಾರದಾ ಶರನ್ನವರಾತ್ರಿ ಉತ್ಸವ ನಿಮಿತ್ಯ ಅನುಭವ ಮಂಟಪ ಸಂಘದ ಮಹಿಳಾ ಸದಸ್ಯರಿಂದ ಕಲ್ಯಾಣ ದರ್ಶನ, ವೈರಾಗ್ಯನಿಧಿ ಅಕ್ಕಮಹಾದೇವಿ ದೃಶ್ಯ ರೂಪಕ ನಡೆಯಿತು.
ಡಾ. ವೀಣಾ ಬಿರಾದಾರ ಅವರು ರಚಿಸಿ, ಸಂಭಾಷಣೆ ಬರೆದು, ಮಾರ್ಗದರ್ಶನ ಮತ್ತು ನಿರ್ದೇಶನ ಮಾಡಿದ ಅಕ್ಕಮಹಾದೇವಿ ದೃಶ್ಯ ರೂಪಕದಲ್ಲಿ ಅಲ್ಲಮ ಪ್ರಭುದೇವ ಪಾತ್ರದಲ್ಲಿ ಸುನಿತಾ ತಪಶೆಟ್ಟಿ, ಉಮಾ ಪುಂಡಪ್ಪನವರ ಬಸವಣ್ಣ, ಸಂಗೀತಾ ಮಠಪತಿ ಅಕ್ಕಮಹಾದೇವಿ ಪಾತ್ರದಲ್ಲಿ, ಸುಮಾ ಜಿ. ಚನ್ನಬಸವಣ್ಣ, ಕಸ್ತೂರಿ ಬೆಳಕ್ಕಿ ಅಕ್ಕನಾಗಮ್ಮ ಶ್ವೇತಾ ಕಲ್ಯಾಣಶೆಟ್ಟರ ಮಡಿವಾಳ ಮಾಚಿದೇವ. ರಾಜೇಶ್ವರಿ ಮಠದ ಕಿನ್ನರಿ ಬೊಮ್ಮಯ್ಯ, ಶಶಿಕಲಾ ಕೋಳಕೂರ ಸಮಗಾರ ಹರಳಯ್ಯ, ನೀಲಾಂಬಿಕಾ ಹೊಸಕೆರಿ ಕಲ್ಯಾಣಮ್ಮ, ಪ್ರೇಮಾ ಗಡದ ಆಯ್ದಕ್ಕಿ ಲಕ್ಕಮ್ಮ ನಿರ್ಮಲಾ ಅಂಬಿಗರ ಚೌಡಯ್ಯ, ಸುಷ್ಮತಾ ಕಡಗದ ಹಡಪದ ಅಪ್ಪಣ್ಣ, ರಾಜೇಶ್ವರಿ ಕವಲೂರ ನೀಲಾಂಬಿಕೆ, ಸುಮಿತ್ರಾ ಎಲಿಗಾರ ಗಂಗಾಂಬಿಕಾ ನಂದಾ ರಾಮನಗೌಡರ ಬೊಂತಾದೇವಿ, ಶೋಭಾ ಅಂತಣ್ಣವರ ಸತ್ಯಕ್ಕ, ಗೌರಿ ಪಟ್ಟಣಶೆಟ್ಟಿ ಸುಮತಿ. ಕನ್ಯಾಕುಮಾರಿ ನಿರ್ಮಲ ಶೆಟ್ಟಿ, ರೇಣುಕಾ ಹೂಗಾರ ಆಯ್ದಕ್ಕಿ ಮಾರಯ್ಯ ಸೇರಿದಂತೆ ಬಸವಾದಿ ಶರಣರ ಪಾತ್ರದಲ್ಲಿ ವಚನ ಹೇಳುವ ಮೂಲಕ ತಮ್ಮ ಅನುಭಾವ ಮಂಡಿಸಿದರು.
ಕಲ್ಯಾಣದಲ್ಲಿ ಅಲ್ಲಮ ಪ್ರಭುದೇವ ಹಾಗೂ ಅಕ್ಕಮಹಾದೇವಿ ನಡುವೆ ನಡೆದ ಸಂಭಾಷಣೆ ಮತ್ತು ಘರ್ಷಣೆ ಅನುಭಾವ ಅತ್ಯಂತ ತುಂಬಾ ಚೆನ್ನಾಗಿ ಮೂಡಿ ಬಂದಿತಲ್ಲದೆ ಅಕ್ಕಮಹಾದೇವಿ ಕದಳಿ ವನಕ್ಕೆ ತೆರಳಿ ಲಿಂಗದಲ್ಲಿ ಲೀನಳಾದ ದೃಶ್ಯ ಆದ್ಭುತವಾಗಿತ್ತು. ಅನುಭವ ಮಂಟಪದಲ್ಲಿ ಸೇರಿದ ವಿವಿಧ ಕಾಯಕಯೋಗಿಗಳು ಶರಣ ಶರಣೆಯರು ತಾವು ರಚಿಸಿದ ವಚನಗಳನ್ನು ಅಲ್ಲಮಪ್ರಭುದೇವರ ಮುಂದೆ ಮಂಡಿಸಿದ್ದಲ್ಲದೆ, ಅನುಭಾವ ಮಾಡಿ ಪ್ರೇಕ್ಷಕರ ಮನ ಮುದಗೊಳಿಸಿ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ದೃಶ್ಯ ರೂಪಕ ಮೂಲಕ ಕಲ್ಯಾಣ ದರ್ಶನ ಮಾಡಿಸಿದರು.