Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವವಿದ್ಯಾಲಯಗಳು ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಲು ಮುಂದಾಗಬೇಕು: ಡಿಸಿ ನಾಗೇಂದ್ರ ಪ್ರಸಾದ್.ಕೆ

ವಿಶ್ರೀಕೃ ವಿವಿಯಲ್ಲಿ ಎರಡು ದಿನಗಳ ವಿಜ್ಞಾನ ಪ್ರದರ್ಶನ ಮೇಳಕ್ಕೆ ಚಾಲನೆ

ಬಳ್ಳಾರಿ,ಮೇ 22ವಿಶ್ವವಿದ್ಯಾಲಯಗಳು ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ.ಸಿದ್ದು.ಪಿ ಆಲಗೂರ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ವಿಜ್ಞಾನ ಪ್ರದರ್ಶನ-2026 ಮೇಳಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಎಐ ಯುಗದಲ್ಲಿ ವಿಜ್ಞಾನವನ್ನು ಸ್ಥಳೀಯ ಭಾಷೆಯಲ್ಲಿ ಜನಸಾಮಾನ್ಯರಿಗೆ ತಲುಪುವ ಹಾಗೆ ರೂಪಾಂತರಗೊಳಿಸುವುದು ಅಗತ್ಯವಿದೆ. ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಅವಶ್ಯಕವಾಗಿದೆ. ವಿವಿಗಳು ವಿನೂತನ ಮಾದರಿಯ ಗ್ರಂಥಾಲಯಗಳನ್ನು ಹೊಂದಬೇಕು. ಸಾಮಾನ್ಯ ವಿಜ್ಞಾನದ ಮಹತ್ವ ಕುರಿತು ಜನಸಾಮಾನ್ಯರಿಗೆ ಜ್ಞಾನ ಲಭಿಸಲು ದಾರಿದೀಪವಾಗಬೇಕು ಎಂದರು.
ತಂತ್ರಜ್ಞಾನ ಬದಲಾದಂತೆ ಪ್ರಾದೇಶಿಕ ವಾತಾವರಣವು ಬದಲಾಗುತ್ತದೆ ಎಂಬುದಕ್ಕೆ ನಮ್ಮ ಬಳ್ಳಾರಿಯೇ ಸ್ಪಷ್ಟ ನಿದರ್ಶನವಾಗಿದ್ದು, ಬಳ್ಳಾರಿಯು ಹಸಿರೀಕರಣಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ವಿಶ್ವವಿದ್ಯಾಲಯಕ್ಕೆ ಅವಶ್ಯವಿರುವ ಗ್ರಂಥಾಲಯ ಹಾಗೂ ಇನ್ನಿತರ ಮೂಲ ಸೌಲಭ್ಯಗಳನ್ನು ಒದಗಿಸಲು ವಿಶೇಷ ಆಸಕ್ತಿ ವಹಿಸುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ವಿಜ್ಞಾನವು ಶೋಧನೆ ಮತ್ತು ಕ್ರಿಯಾತ್ಮಕ ವಿಚಾರಗಳಿಗೆ ವೇದಿಕೆಯಾಗಿದೆ. ವಿಜ್ಞಾನ ಬೆಳೆದಷ್ಟು ಸವಾಲುಗಳು ಸಾಕಷ್ಟು ಉದ್ಭವಿಸುತ್ತವೆ. ರಾಮನ್ ಪರಿಣಾಮವನ್ನು ಹಲವಾರು ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಂಶೋಧನೆಗಳಲ್ಲಿ ಎಲ್ಲರೂ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಭಾಷಣಕಾರರಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ ಲೋಕನಾಥ್ ಅವರು ಮಾತನಾಡಿ, ಇಂದಿನ ದಿನಮಾನಗಳಲ್ಲಿ ಸ್ಮಾರ್ಟ್‍ಫೋನ್ ಗೀಳು ಬಿಟ್ಟು ‘ಸ್ಮಾರ್ಟ್’ (ಸ್ಪೆಸಿಫಿಕ್, ಮೆಸರೇಬಲ್, ಅಚಿವೇಬಲ್, ರಿಲೆವೆಂಟ್, ಟೈಮ್‍ಬಾಂಡ್) ಆಗಿ ಕಾರ್ಯನಿರ್ವಹಿಸಿದಲ್ಲಿ ಎಲ್ಲ ಕ್ಷೇತ್ರದ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ವಿಜ್ಞಾನವು ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ನವೀನ ವಿಚಾರಧಾರೆಗಳನ್ನು ತಮ್ಮ ಸಂಶೋಧನೆಗಳಾಗಿ ಮಾರ್ಪಡಿಸಬೇಕು. ಈ ಮಾದರಿಯ ಮೇಳವು ವಿದ್ಯಾರ್ಥಿ ಹಾಗೂ ಶಿಕ್ಷಕರ ವೈಜ್ಞಾನಿಕ ಚಟುವಟಿಕೆಗಳನ್ನು ಅನಾವರಣಗೊಳಿಸುವ ಮೂಲಕ ಅವರಲ್ಲಿ ಹೊಸ ಆಸಕ್ತಿ, ಅನ್ವೇಷಣೆ ಹಾಗೂ ವಿಚಾರಗಳು ಆಳವಾಗಿ ಬೇರೂರುವಂತೆ ಮಾಡುತ್ತವೆ. ನೂತನ ಅನ್ವೇಷಣೆ, ಸಕಾರಾತ್ಮಕ ಚಿಂತನೆ ಮತ್ತು ಧನಾತ್ಮಕ ವಿಚಾರಗಳಿಗೆ ಮಾತ್ರ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಮಾತನಾಡಿ, ವೈಜ್ಞಾನಿಕ ಮೇಳಗಳು ವಿದ್ಯಾರ್ಥಿಗಳಲ್ಲಿ ಕಲಿಕಾ ವಾತಾವರಣವನ್ನು ಉತ್ತೇಜಿಸುತ್ತವೆ. ಸಂಶೋಧಕರುಗಳು ಹೊಸ ಅನ್ವೇಷಣೆ ಹಾಗೂ ಜನಪರ ಅಭಿವೃದ್ಧಿ ಚಿಂತನೆಯುಕ್ತ ವೈಜ್ಞಾನಿಕ ವಿಚಾರಗಳನ್ನು ಹೆಚ್ಚಾಗಿ ಹೊರತರಬೇಕು ಎಂದರು.
ಕಾರ್ಯಕ್ರಮದಲ್ಲಿ ಅನ್ವಯಿಕ ವಿಜ್ಞಾನ ನಿಕಾಯದ ಡೀನ್ ಪ್ರೊ.ಹನುಮೇಶ ವೈದ್ಯ ಅವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಂದ ನಿರ್ಮಿತವಾದ ವೆಬ್‍ಸೈಟ್ ಮಾದರಿ (ಎಐ ಇಂಟಿಗ್ರೇಟೆಡ್ ಡೈನಾಮಿಕ ಮಾಡೆಲ್), ಬೆಸ್ಟ್ ಆಫ್ ಬಳ್ಳಾರಿ ಹಾಗೂ ಆಸ್ಕ ವಿಎಸ್‍ಕೆಯು (ವಿಎಸ್‍ಕೆಯು ಚಾಟ್ ಜಿಪಿಟಿ) ಗಳನ್ನು ಗಣ್ಯರು ಅನಾವರಣಗೊಳಿಸಿದರು.
ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ ಸಾಲಿ, ವಿತ್ತಾಧಿಕಾರಿ ಸ್ಫೂರ್ತಿ ಕೆ.ಜಿ., ಶುದ್ಧ ವಿಜ್ಞಾನ ನಿಕಾಯದ ಡೀನ್ ಪ್ರೊ.ಉದಯ್ ಕುಮಾರ್ ಖಡ್ಕೆ, ಕಾರ್ಯಕ್ರಮದ ಸಹ ಸಂಚಾಲಕ ಡಾ.ಪಿ.ಶರತ್ ಕುಮಾರ ವೇದಿಕೆಯಲ್ಲಿದ್ದರು. ವಿವಿಧ ನಿಕಾಯಗಳ ಡೀನರು, ಎಲ್ಲ ವಿಜ್ಞಾನ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಡಾ.ಸಿದ್ದೇಶ್ವರಿ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕ ಪ್ರೊ.ತಿಪ್ಪೇರುದ್ರಪ್ಪ ಜೆ., ಅತಿಥಿಗಳನ್ನು ಸ್ವಾಗತಿಸಿದರು. ವಿವಿಯ ಕುಲಸಚಿವ ಪ್ರೊ.ವಿ.ಲೋಕೇಶ ವಂದಿಸಿದರು.
*ವೀಕ್ಷಣೆಗೆ ಮುಕ್ತ ಅವಕಾಶ:*
ವಿವಿಯ ಎಲ್ಲ ವಿಜ್ಞಾನ ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಸಿದ್ಧಪಡಿಸಿರುವ 100ಕ್ಕೂ ಅಧಿಕ ವೈವಿಧ್ಯಮಯ ವಿಜ್ಞಾನ ಪ್ರಯೋಗಗಳ ಪ್ರದರ್ಶನದ ಸಂಭ್ರಮಕ್ಕೆ ಸಾಕ್ಷಿಯಾಗಿವೆ. ವಿಜ್ಞಾನ ಪ್ರದರ್ಶನ ಮೇಳ ಶುಕ್ರವಾರವೂ ಮುಂದುವರೆಯುವುದರಿಂದ ಆಸಕ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಮುಕ್ತವಾಗಿ ಮೇಳ ವೀಕ್ಷಿಸಬಹುದಾಗಿದೆ.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST