ರಾಯಬಾಗ,ಮೇ,೦೫: ಶ್ರೀ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಬರುವ ಬುಧವಾರ (ಮೇ ೬ರಂದು) ಭವ್ಯವಾಗಿ ಪ್ರಾರಂಭವಾಗಲಿದೆ .ಜಾತ್ರೆಯ ಉದ್ಘಾಟನಾ ಸಮಾರಂಭಕ್ಕೆ ಕನ್ನೆರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಆಗಮಿಸುತ್ತಿದ್ದಾರೆ
ಈ ಕುರಿತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಣಯ ಪಾಟೀಲ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ನೀಡಿದ್ದು, ಐದು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಹಾಲಕ್ಷ್ಮಿ ಜಾತ್ರೆ ಮಹೋತ್ಸವವು ಈ ಭಾಗದ ಅತಿ ದೊಡ್ಡ ಭಂಡಾರದ ಜಾತ್ರೆಗಳಲ್ಲಿ ಒಂದಾಗಿದೆ. ಜಾತ್ರೆಯ ಅಂಗವಾಗಿ ಭಕ್ತರಿಗಾಗಿ ವಿಶೇಷ ಪೂಜೆಗಳು, ಆಧ್ಯಾತ್ಮಿಕ ಕಾರ್ಯಕ್ರಮಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾನು ಸಹ ಖುದ್ದಾಗಿ ಈ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದೇನೆ, ಎಂದು ತಿಳಿಸಿದ್ದಾರೆ.
ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ದೇವಿಯ ದರ್ಶನ ಹಾಗೂ ಆಶೀರ್ವಾದ ಪಡೆಯಲು ದೂರದೂರಿನಿಂದ ಭಕ್ತರು ಆಗಮಿಸಲಿದ್ದಾರೆ. ಭಂಡಾರದ ವ್ಯವಸ್ಥೆಯೂ ವಿಜೃಂಭಣೆಯಿಂದ ನಡೆಯಲಿದೆ.
ಕ್ಷೇತ್ರದ ಸಮಸ್ತ ಭಕ್ತಮಂಡಳಿ ಹಾಗೂ ಸಾರ್ವಜನಿಕರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಹಾಗೂ ಶ್ರೀ ಮಹಾಲಕ್ಷ್ಮಿ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಪ್ರಣಯ ಪಾಟೀಲ ಅವರು ಮನವಿ ಮಾಡಿದ್ದಾರೆ.