ಧಾರವಾಡ ,03 : ಧಾರವಾಡ ರಂಗಾಯಣವು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಬೊಳುವಾರು ಮಹಮ್ಮದ್ ಕುಂಞ ಅವರ ಕಾದಂಬರಿ ಆಧಾರಿತ, ನಟರಾಜ್ ಹೊನ್ನವಳ್ಳಿ ನಿರ್ದೇಶನದ, ಶಿವಮೊಗ್ಗ ರಂಗಾಯಣದ ಪ್ರಸ್ತುತಿಯ ‘ಸ್ವಾತಂತ್ರ್ಯದ ಓಟ’ ನಾಟಕವನ್ನು ಜುಲೈ 5 ರಂದು ಭಾನುವಾರ ಸಂಜೆ 5:30 ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಪ್ರದರ್ಶಿಸಲಾಗುವುದು ಎಂದು ರಂಗಾಯಣ ನಿರ್ದೇಶಕ ಝಕೀರ ನದಾಫ ಅವರು ಹೇಳಿದರು.
ಅವರು ಇಂದು (ಜು.02) ಬೆಳಿಗ್ಗೆ ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು.
ದೇಶ ವಿಭಜನೆಯ ಸಂದರ್ಭದಲ್ಲಿ ಎಲ್ಲವನ್ನೂ ಕಳೆದುಕೊಂಡ ಜನರ ಬದುಕು, ಅನುಮಾನ ಮತ್ತು ಅಸಹನೆಯ ನಡುವೆಯೂ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡ ಚಾಂದ್ ಅಲಿ ಎಂಬ ಯುವಕನ ಜೀವನಗಾಥೆಯನ್ನು ನಾಟಕ ಕಟ್ಟಿಕೊಡುತ್ತದೆ. ಪಾಕಿಸ್ತಾನದಿಂದ ಭಾರತಕ್ಕೆ ಬಂದು ತನ್ನ ಗುರುತನ್ನು ಮುಚ್ಚಿಟ್ಟುಕೊಂಡು ಬದುಕಬೇಕಾದ ಅನಿವಾರ್ಯತೆ. ಮುತ್ತುಪ್ಪಾಡಿಯಲ್ಲಿ ಮಾನವೀಯ ಸಂಬಂಧಗಳ ಆಶ್ರಯ ಪಡೆದ ಅವನ ಬದುಕಿನ ಅತಂತ್ರತೆಯನ್ನು ನಾಟಕ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ ಎಂದು ತಿಳಿಸಿದರು.
ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಮಾನವೀಯ ಸಂಬಂಧಗಳ ಮೂಲಕ ಅನಾವರಣಗೊಳಿಸುವ ಈ ನಾಟಕವು ಜಾತಿ, ಧರ್ಮಗಳನ್ನು ಮೀರಿ ಮನುಷ್ಯತ್ವವೇ ಶ್ರೇಷ್ಠ ಎಂಬ ಸಂದೇಶ ಸಾರುತ್ತದೆ. ವಾಘಾ ಗಡಿಯಿಂದ ಆರಂಭವಾಗಿ ಕರಾಚಿ, ಲಾಹೋರ್, ದೆಹಲಿ, ಮುತ್ತುಪ್ಪಾಡಿ, ಕ್ಯಾಲಿಫೆÇೀರ್ನಿಯಾ ಹಾಗೂ ಬರ್ಲಿನ್‍ವರೆಗೆ ಸಾಗುವ ಕಥಾನಕವು ದೇಶ ವಿಭಜನೆಯಿಂದ ಸುವರ್ಣ ಸ್ವಾತಂತ್ರ್ಯೋತ್ಸವದವರೆಗಿನ ಭಾರತದ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಬದುಕಿನ ಅನುಭವಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ ಎಂದು ಹೇಳಿದರು.
ಸಮಾಜದಲ್ಲಿರುವ ಅಪನಂಬಿಕೆ ಹಾಗೂ ಸಂಘರ್ಷಗಳನ್ನು ಕಡಿಮೆ ಮಾಡಿ ಸಾಮರಸ್ಯದ ಸಂದೇಶ ಸಾರುವ ಪ್ರಯತ್ನವೇ ‘ಸ್ವಾತಂತ್ರ್ಯದ ಓಟ’ ನಾಟಕದ ಪ್ರಮುಖ ವೈಶಿಷ್ಟ್ಯವಾಗಿದೆ. ನಾಟಕ ವೀಕ್ಷಣೆಗೆ ರೂ.100 ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ವೀ. ಹುಡೇದ ಅವರು ಇದ್ದರು.