ಬುದ್ಧ ಬಸವ ಅಂಬೇಡ್ಕರ ಜಯಂತಿಯ ಅಂಗವಾಗಿ ಪ್ರಜಾಪ್ರಭುತ್ವದಲ್ಲಿ ದಲಿತರ ಸ್ಥಾನ ಮಾನ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯಲಿದೆ ಎಂದು ಡಿಎಸ್‌ಎಸ್ ನಾಗವಾರ ಬಣದ ರಾಜ್ಯ ಸಂಚಾಲಕ ಶಾಮರಾವ ಘಾಟಗೆ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾನತೆ, ಅಪೃಶ್ಯತೆ , ಹಸಿವಿನಿಂದ ನೊಂದಿದ್ದ ಮೂಲ ನಿವಾಸಿಗಳ ಬದುಕನ್ನು ಬದಲಿಸಲು ಶ್ರಮಿಸಿದ ಬುದ್ಧ ವಸವ ಅಂಬೇಡ್ಕರ ಅವರ ಚಿಂತನೆಗಳು ಯುವ ಜನತೆಗೆ ತಿಳಿಸಿಕೊಡುವ ಉದ್ದೇಶ ದಿಂದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಅಸಮಾನತೆಯ ವಿರುದ್ಧದ ಕಾನೂನುಗಳು ಜಾರಿಯಾಗ ಬೇಕಿದೆ. ಅದರ ಬದಲು ಕೇವಲ ಆರ್ಥಿಕತೆಯ ಬಿಲ್‌ಗಳು ಪಾಸ್ ಆಗುತ್ತಿರುವದು ಸಂವಿಧಾನದ ವಿರೋಧವಾಗಿದೆ. ಸಂವಿಧಾನದ ಮೂಲ ಆಶಯಗಳ ಬಗ್ಗೆ ಚರ್ಚಿಸಿ ಯುವ ಜನತೆಗೆ ತಿಳಿಸಿ ಕೊಡುವ ಮೂಲಕ ಸೂಕ್ತ ನಿರ್ಧಾರಕ್ಕೆ ಬರಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು. ಗ್ರಾಮೀಣ ಭಾಗದ ಶೋಷಿತ ಸಮುದಾಯ ಶಿಕ್ಷಣದ ಕಡೆಗೆ ಒಲವು ತೋರುತ್ತಿಲ್ಲ ಜತೆಗೆ ಮಹಿಳಾ ಮೀಸಲಾತಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ದಲಿತ ಮಹಿಳೆಯರ ಪಾಲ್ಗೊಳ್ಳುವಿಕೆ ಮುಂತಾದ ವಿಷಯಗಳ ಕುರಿತಾದ ಸಂವಾದ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು. ರಾಜ್ಯದಾದ್ಯಂತ ಎಲ್ಲ ಪದಾಧಿಕಾರಿಗಳು, ಮಹಿಳೆಯರು ಕಾರ್ಯಕರ್ತರು, ವಿದ್ಯಾರ್ಥಿಗಳು, ಹಿತ ಚಿಂತಕರು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು. ಪರಶುರಾಮ ಮಾಂಗ, ಮುತ್ತಣ್ಣ ಮೇತ್ರಿ, ಪುಂಡಲೀಕ ಮಾದರ, ಆನಂದ ಮೇತ್ರಿ, ಪ್ರಕಾಶ ಜಂಬಗಿ, ಬಸವರಾಜ ಜಮಖಂಡಿ, ಮುಂತಾದವರಿದ್ದರು.