ಮುದ್ದೇಬಿಹಾಳ: ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ, ಅಷ್ಟೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದೂ ಅತ್ಯಂತ ಪ್ರಮುಖವಾಗಿದೆ. ಶಿಕ್ಷಣದಿಂದ ಜ್ಞಾನ ಸಂಪಾದನೆಯಾದರೆ, ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹಾಗೂ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಸಹಯೋಗದಲ್ಲಿ ಗ್ರಾಮದ ಬಸವೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಇಂಗಳಗೇರಿ ವಲಯ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಕ್ರೀಡಾಕೂಟದಲ್ಲಿ ಒಬ್ಬರು ಗೆದ್ದರೆ ಮತ್ತೊಬ್ಬರು ಸೋಲಲೇಬೇಕು. ಗೆದ್ದವರು ಸೋತವರನ್ನು ಹೀಯಾಳಿಸಬಾರದು. ಅದೇ ರೀತಿ ಸೋತವರು ದುಃಖದಿಂದ ಕ್ರೀಡಾಂಗಣದಿಂದ ಹೊರನಡೆಯದೆ, ಸೋಲಿನಿಂದ ಪಾಠ ಕಲಿತು ಮುಂದಿನ ಸ್ಪರ್ಧೆಗೆ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ವಲಯ ಮಟ್ಟದಲ್ಲಿ ಗೆದ್ದ ಕ್ರೀಡಾಪಟುಗಳಿಗೆ ಮುಂದಿನ ಹಂತದಲ್ಲಿ ತಾಲೂಕು ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ಹೀಗಾಗಿ ಗೆಲುವು ಸಾಧಿಸಿದವರು ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಶ್ರಮಿಸಬೇಕು. ಸೋತವರು ತಮ್ಮ ತಪ್ಪುಗಳನ್ನು ಅರಿತು ಮುಂದಿನ ವರ್ಷ ನಡೆಯುವ ಪಂದ್ಯಾವಳಿಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುಂಟೋಜಿ ಬಸವೇಶ್ವರ ಪ್ರೌಢಶಾಲೆಗೆ ಪ್ರಥಮ ಸ್ಥಾನ:
ಕುಂಟೋಜಿ ಗ್ರಾಮದಲ್ಲಿ ನಡೆದ ಇಂಗಳಗೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಹಾಗೂ ಬಾಲಕಿಯರ ಖೋ-ಖೋ ಮತ್ತು ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ಕುಂಟೋಜಿ ಗ್ರಾಮದ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಗಮನ ಸೆಳೆದರು.
ಇನ್ನು ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಇಂಗಳಗೇರಿಯ ಜಿ.ಎಚ್.ಎಸ್. ಶಾಲೆ ಪ್ರಥಮ ಹಾಗೂ ಕುಂಟೋಜಿಯ ಬಸವೇಶ್ವರ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಬಾಲಕಿಯರ ವಾಲಿಬಾಲ್‌ನಲ್ಲಿ ಮುದ್ದೇಬಿಹಾಳ ಪಟ್ಟಣದ ಎಂ.ಎಂ.ಡಿ.ಆರ್. ಶಾಲೆ ಪ್ರಥಮ ಹಾಗೂ ಜಮ್ಮಲದಿನ್ನಿ ಗ್ರಾಮದ ಕೆ.ಆರ್.ಎಸ್. ಶಾಲೆ ದ್ವಿತೀಯ ಸ್ಥಾನ ಗಳಿಸಿತು.
ಬಾಲಕಿಯರ ಥ್ರೋಬಾಲ್‌ನಲ್ಲಿ ಬಿದರಕುಂದಿ ಗ್ರಾಮದ ಆರ್.ಎಂ.ಎಸ್.ಎ. ಶಾಲೆ ಪ್ರಥಮ ಹಾಗೂ ಜಮ್ಮಲದಿನ್ನಿ ಗ್ರಾಮದ ಕೆ.ಆರ್.ಸಿ. ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು.
ವಿವಿಧ ಕ್ರೀಡಾ ವಿಭಾಗಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಶಾಲೆಗಳ ವಿದ್ಯಾರ್ಥಿಗಳಿಗೆ ಕ್ರೀಡಾಕೂಟದ ಆಯೋಜಕರ ವತಿಯಿಂದ ಬಹುಮಾನ ಹಾಗೂ ಪ್ರಶಸ್ತಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಗುರುಲಿಂಗಪ್ಪ ಸುಳ್ಳೊಳ್ಳಿ, ಎಸ್‌ಡಿಎಂಸಿ ಸರ್ವ ಸದಸ್ಯರು, ಶಿಕ್ಷಕರು, ಕ್ರೀಡಾಪಟುಗಳು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.