Also read
ಕಾಗವಾಡ : ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ತಮಗೆ ವಿದ್ಯೆ, ಜ್ಞಾನ ಮತ್ತು ಸಂಸ್ಕಾರ ನೀಡಿದ ವಿದ್ಯಾಸಂಸ್ಥೆಯನ್ನು ಎಂದಿಗೂ ಮರೆಯಬಾರದು ಎಂದು ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಪ್ರೊ ಬಿ.ಎ .ಪಾಟೀಲ ಅಭಿಪ್ರಾಯಸಿದರು. ಅವರು ಸ್ಥಳೀಯ ಶಿವಾನಂದ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವು ಹಮ್ಮಿಕೊಂಡಿರುವ ಹಿರಿಯ ವಿದ್ಯಾರ್ಥಿಗಳ ಸಭೆ 'ಸ್ನೇಹ ಸಂಗಮ-2026 ' ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮುಂದುವರೆದು ಅವರು ಈ ಕಾಲೇಜು ನಿಮಗೆ ಕೇವಲ ವಿದ್ಯೆ ಕಲಿಸಿದ ಸಂಸ್ಥೆಯಲ್ಲ; ಇದು ನಿಮ್ಮ ತವರಿನ ಮನೆಯಿದ್ದಂತೆ. ನೀವು ಯಾವಾಗ ಬೇಕಾದರೂ ಇಲ್ಲಿಗೆ ಬರಬಹುದು, ನಿಮ್ಮ ಸುಖ-ದುಃಖ , ಸಾಧನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ಮತ್ತೋರ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಆಡಳಿತ ಅಧಿಕಾರಿಗಳಾದ ಪ್ರೊ. ವಿ. ಎಸ್. ತುಗ್ಗಶೆಟ್ಟಿ ಅವರು ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಹೆಮ್ಮೆ ಮತ್ತು ಆಸ್ತಿಯಾಗಿದ್ದು, ಅವರ ಸಾಧನೆಗಳು ವಿದ್ಯಾಸಂಸ್ಥೆಯ ಗೌರವವನ್ನು ಹೆಚ್ಚಿಸುತ್ತವೆ. ಹಳೆಯ ಸ್ನೇಹಿತರ ಪುನರ್ಮಿಲನವು ಕೇವಲ ನೆನಪುಗಳನ್ನು ಮೆಲುಕು ಹಾಕುವುದಕ್ಕೆ ಸೀಮಿತವಾಗದೆ, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಹಾಗೂ ಕಾಲೇಜಿನ ಅಭಿವೃದ್ಧಿಗೆ ಸಹಕರಿಸುವ ಸಂಕಲ್ಪವಾಗಬೇಕು ಎಂದು ಆಶಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಡಾ. ಎಸ್. ಪಿ. ತಳವಾರ ಅವರು, ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಮತ್ತು ಹಳೆಯ ವಿದ್ಯಾರ್ಥಿಗಳ ಸಾಧನೆಗಳು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವುದರ ಜೊತೆಗೆ ಪ್ರಸ್ತುತ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತವೆ ಎಂದು ತಿಳಿಸಿದರು.
ಸಂಸ್ಥೆಯ ಏಕನ್ಯಾಸಧಾರಿಗಳಾದ ಪರಮಪೂಜ್ಯ ಶ್ರೀ ಯತೀಶ್ವರಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವದಿಸಿದರು.ಆರಂಭದಲ್ಲಿ ಕು. ಅನನ್ಯ ಕುಲಕರ್ಣಿ ಪ್ರಾರ್ಥಿಸಿದರು.ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಧ್ಯಕ್ಷರಾದ ಪ್ರೊ. ವಿ. ಬಿ. ಬುರ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎ.ಎ.ಪಾಟೀಲ ಸ್ವಾಗತಿಸಿದರು. ಪ್ರೊ. ಎಸ್.ಎ.ಅವಟಿ ವಂದಿಸಿದರು. ಪ್ರೊ. ಎಸ್.ಎಸ್.ಫಡತರೆ ನಿರೂಪಿಸಿದರು. ವೈಭವ ಗುರವ ಮತ್ತು ಆರತಿ ಪೂಜಾರಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ವೇದಿಕೆ ಮೇಲೆ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಪ್ರೊ. ಜೆ. ಕೆ. ಪಾಟೀಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಮಸ್ತ ಬೋಧಕ, ಬೋಧಕೇತರ ಸಿಬ್ಬಂದಿ ಸೇರಿದಂತೆ ಮೂರು ವರ್ಷದ ಬಿ.ಎ, ಬಿ.ಕಾಂ ಮತ್ತು ಬಿ. ಎಸ್ಸಿ ವಿಭಾಗದ 200ಕ್ಕಿಂತ ಹೆಚ್ಚು ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು .