ರಾಮದುರ್ಗ: ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಪ್ಯಾರಿ ಶುಗರ್‍ಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಡೆದುಕೊಳ್ಳಬೇಕು. ರೈತರ ಏನೇ ಸಮಸ್ಯೆಗಳು ಬಂದರು ಅವುಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಕಲ್ಪಿಸಲು ಧನಲಕ್ಷ್ಮೀ ಆಡಳಿತ ಮಂಡಳಿ ಶ್ರಮಿಸಲಿದೆ ಎಂದು ಮಾಜಿ ಶಾಸಕ ಹಾಗೂ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಖಾನಪೇಠದಲ್ಲಿ ಧನಲಕ್ಷ್ಮೀ ಸಕ್ಕರೆ (ಲಿಜ್ ಪಡೆದ ಪ್ಯಾರಿ ಶುಗರ್‍ಸ್) ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ಯಾರಿ ಶುಗರ್‍ಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಡಳಿತ ಮಂಡಳಿಯ ನಿರ್ದೇಶಕರ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಬೇಕು. ರೈತರ ವಿಷಯವಾಗಿ ಅವರು ಏನೇ ಸಲಹೆ ನೀಡಿದರು ನಿರ್ಲಕ್ಷ್ಯಿಸದಂತೆ ಸೂಚನೆ ನೀಡಿದರು.
ಈ ಭಾರಿ ಬರಗಾಲ ಉಂಟಾಗಿ ಕಬ್ಬಿನ ಸಮಸ್ಯೆ ಇದೆ. ನೀರಿನ ಕೊರತೆ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಅವರೊಂದಿಗೆ ಸಹಕಾರಯುತವಾಗಿ ನಡೆದುಕೊಂಡು ಕಬ್ಬು ಪಡೆದುಕೊಳ್ಳುವಲ್ಲಿ ಮುಂದಾಗಬೇಕು. ಅಲ್ಲದೇ ಲವಣಿ ಬರೆಸಿದಂತೆ ನಿಗದಿತ ಸಮಯಕ್ಕೆ ಪಡೆಯುವಲ್ಲಿ ಮುಂದಾಗಬೇಕು. ಈ ಭಾರಿಯ ಕಬ್ಬು ನುರಿಸುವ ಗುರಿಗೆ ನಮ್ಮ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಪ್ಯಾರಿ ಶುಗರ್‍ಸ್ ವ್ಯವಸ್ಥಾಪಕ ನಿರ್ದೇಶಕ ಪಿ. ನಾಗರಾಜನ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ೬.೨೦ ಲಕ್ಷ ಟನ್ನ ಕಬ್ಬು ನುರಿಸುವ ಗುರಿಯನ್ನು ಹೊಂದಿದ್ದು, ಅದಕ್ಕೆ ಆಡಳಿತ ಮಂಡಳಿ ಹಾಗೂ ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ಬಿ.ಎಸ್. ಬೆಳವಣಕಿ, ನಿರ್ದೇಶಕರಾದ ಬಿ.ಎಂ. ತುಪ್ಪದ, ಮಲ್ಲಣ್ಣ ಯಾದವಾಡ, ಪಿ.ಎಫ್. ಪಾಟೀಲ, ಐ.ಎಸ್. ಹರನಟ್ಟಿ, ಎಂ.ಎಂ. ಆತಾರ, ಗೋಪಾಲರಡ್ಡಿ ಸಂಶಿ, ಚಂದ್ರು ರಜಪೂತ, ಅನ್ನಪೂರ್ಣಾ ಪಾಟೀಲ, ಶಿವಾನಂದ ಮುಷ್ಠಿಗೇರಿ, ಈರಣ್ಣ ಕಾಮಣ್ಣವರ, ಬಸನಗೌಡ ದ್ಯಾಮನಗೌಡ್ರ, ಭೀಮಪ್ಪ ಬಸಿಡೋಣಿ, ಎ.ಸಿ. ಸುರಗ, ಪರಪ್ಪ ಜಂಗವಾಡ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕಿ ಶಾಹೀನಾ ಅಖ್ತರ, ಪ್ಯಾರಿ ಶುಗರ್‍ಸ್ ಕೇನ್ ವಿಭಾಗದ ಡಿಜಿಎಂ ರಮೇಶ ಗಂಗರಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರೈತರು, ಪ್ಯಾರಿ ಶುಗರ್‍ಸ್ ಸಿಬ್ಬಂದಿ ಉಪಸ್ಥಿತರಿದ್ದರು.