ಕೊಪ್ಪಳ ಜುಲೈ 18 : ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ಸಮಗ್ರ (ಎಸ್‌ಐಆರ್) ಪರಿಷ್ಕರಣೆಯ ವೇಳಾಪಟ್ಟಿಯನ್ನು ಮರುನಿಗದಿಪಡಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ. ಇಟ್ನಾಳ ಅವರು ಹೇಳಿದರು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ರ ಇದುವರೆಗಿನ ಪ್ರಗತಿಯ ಮತ್ತು ವೇಳಾಪಟ್ಟಿ ವಿಸ್ತರಣೆ ಕುರಿತು ಮಾಹಿತಿ ನೀಡಲು ಜಿಲ್ಲಾಡಳಿತ ಭವನದ ಕೆಸ್ವಾನ್-2ರ ಸಭಾಂಗಣದಲ್ಲಿ ಗುರುವಾರ (ಜು. 16ರಂದು) ಕರೆದ ಜಿಲ್ಲೆಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಬಿ.ಎಲ್.ಓ.ಗಳಿಂದ ಮನೆ ಮನೆ ಭೇಟಿಯನ್ನು ಆಗಸ್ಟ್ 8 ರವರೆಗೆ ವಿಸ್ತರಿಸಲಾಗಿದೆ. ಮತಗಟ್ಟೆಗಳ ರ‍್ಯಾಷನಲೈಜೆಷನ್ ಆಗಸ್ಟ್ 8 ರೊಳಗೆ ನಡೆಯಲಿದ್ದು, ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುತ್ತದೆ. ಆಗಸ್ಟ್ 17 ರಿಂದ ಸೆಪ್ಟೆಂಬರ್ 16ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಆಗಸ್ಟ್ 17 ರಿಂದ ಅಕ್ಟೋಬರ್ 15 ರವರೆಗೆ ನೊಟೀಸ್ ಅವಧಿ, ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. 2026ರ ಅಕ್ಟೋಬರ್ 19 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳು ಒಳಗೊಂಡಂತೆ ಕೊಪ್ಪಳ ಜಿಲ್ಲೆಯಲ್ಲಿರು ಒಟ್ಟು 11,90,214 ಮತದಾರರಿದ್ದು, ಈ ಎಲ್ಲಾ ಮತದಾರರಿಗೆ ಮನೆಮನೆ ಭೇಟಿ ವೇಳೆ ಗಣತಿ ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ. ಜುಲೈ 16ರ ಸಂಜೆವರೆಗೆ 7,69,695 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಜಿಲ್ಲೆಯಲ್ಲಿಯಲ್ಲಿ ಶೇ. 64.07 ರಷ್ಟು ಪ್ರಗತಿಯಾಗಿದೆ. ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರಗಳವಾರು ಗಣತಿ ನಮೂನೆಗಳನ್ನು ಡಿಜಿಟಲೀಕರಣ ಪ್ರಗತಿಯು ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ. 70.49 ರಷ್ಟು ಆಗಿದೆ. ಯಲಬುರ್ಗಾ ಕ್ಷೇತ್ರದಲ್ಲಿ ಶೇ. 66.03 ರಷ್ಟು, ಗಂಗಾವತಿ ಕ್ಷೇತ್ರದಲ್ಲಿ ಶೇ. 63.06 ರಷ್ಟು, ಕುಷ್ಟಗಿ ಕ್ಷೇತ್ರದಲ್ಲಿ ಶೇ. 61.58 ರಷ್ಟು ಮತ್ತು ಕೊಪ್ಪಳ ಕ್ಷೇತ್ರದಲ್ಲಿ ಶೇ. 59.88 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲೀಕರಣವಾಗಿದೆ ಎಂದು ವಿವರಿಸಿದರು.
ಪ್ರೊಜಿನಿ ಮ್ಯಾಪಿಂಗ್ ಒಳಗೊಂಡಂತೆ ಮತ್ತು ಆನ್‌ಲೈನ್ ಮೂಲಕ ಬಂದಿರುವ 475 ಅರ್ಜಿಗಳ ಪರಿಶೀಲನೆ ಬಾಕಿಯಿದೆ. ಇದುವರೆಗೂ 1426 ಗೈರು, 13,068 ಖಾಯಂ ಸ್ಥಳಾಂತರ, 9333 ಮೃತರು, 5131 ಡುಪ್ಲಿಕೇಟ್, 42 ಇತರೆ ಎಂಬುದಾಗಿ ಕಂಡು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಬಿಎಲ್‌ಓ-ಬಿಎಲ್‌ಎ ಸಭೆ ಮಾಡಿದ್ದು, ವಿಧಾನಸಭಾ ಕ್ಷೇತ್ರವಾರು ಸಭೆ ನಡೆಸಲು ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಜಿಲ್ಲಾ ಚುನಾವಣಾ ಶಾಖೆಯ ತಹಶೀಲ್ದಾರ ರವಿ ವಸ್ತ್ರದ್, ಕೊಪ್ಪಳ ಜಿಲ್ಲೆಯ ಮಾನ್ಯತೆ ಪಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸುನೀಲ್ ಹೆಸರೂರ, ಕೃಷ್ಣ ಇಟ್ಟಂಗಿ, ಸೋಮನಗೌಡ, ಮಹೇಬುಬಪಾಶಾ ಸೇರಿದಂತೆ ಮತ್ತಿತರರು ಚುನಾವಣಾ ಶಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.