ಕೊಪ್ಪಳ: ಕುಷ್ಟಗಿ ಪಟ್ಟಣದ ಎಸ್ ವಿ ಸಿ ಮೆಮೋರಿಯಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಯಶ್ ಮಧಾಳೆ ಗುಜರಾತ್ ರಾಜ್ಯದಲ್ಲಿ ನಡೆಯುವ ರಾಷ್ಟ್ರಮಟ್ಟದ ಪ್ರತಿಷ್ಠಿತ 'ಪ್ರೇರಣಾ ಉತ್ಸವ' ಕಾರ್ಯಕ್ರಮ ಪಾಲ್ಗೊಳ್ಳಲು ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ ಎಂದು
ಎಸ್ ವಿ ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ ವಿ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಿಂದ ಎರಡು ಶಾಲೆಗಳ ಎರಡು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಅದರಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಎಸ್ ವಿ ಸಿ ಮೆಮೋರಿಯಲ್ ಪಬ್ಲಿಕ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಯಶ್ ಮಧಾಳೆ ಒಬ್ಬರು. ಗುಜರಾತ್ ರಾಜ್ಯದ ವಡ್ನಾಗರ್ ನಲ್ಲಿ ಜುಲೈ 19 ರಿಂದ 25ರ ತನಕ ಒಂದು ವಾರ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತಿಯೊಂದು ರಾಜ್ಯದಿಂದ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಶಿಕ್ಷಣ ಮಂತ್ರಾಲಯ 'ಪ್ರೇರಣಾ ಉತ್ಸವ' ಆಯೋಜಿಸುತ್ತಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ವಿದ್ಯಾರ್ಥಿಗಳಲ್ಲಿ ಒಂಬತ್ತು ಅಂಶಗಳ ನಾಯಕತ್ವ ಗುಣಗಳನ್ನು ಬೆಳೆಸುವ ಗುರಿ ಹೊಂದಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಕಲಿಕಾ ಅನುಭವಗಳನ್ನು ಪಡೆಯಲಿದ್ದಾರೆ. ಮೋದಿ ಅವರು ಓದಿದ ಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಆಯ್ಕೆಯಾಗಲು 'ವಿಕಸಿತ ಭಾರತ' ಹಾಗೂ 'ಸಮಾಜ ಮತ್ತು ದೇಶಕ್ಕೆ ನನ್ನ ಕೊಡುಗೆ' ವಿಷಯಗಳ ಕುರಿತು ಐದು ಹಂತದ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ಆಯ್ಕೆಯಾಗುವ ಮೂಲಕ ಯಶ್ ಮಧಾಳೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೀರ್ತಿ ತಂದಿದ್ದಾನೆ ಎಂದು ತಿಳಿಸಿದ್ದಾರೆ.
ಸಂಸ್ಥೆಯ ಸಿಇಓ ಡಾ. ಜಗದೀಶ್ ಅಂಗಡಿ, ಶಾಲೆಯ ಪ್ರಾಂಶುಪಾಲ ಮಹದೇವ ಮಧಾಳೆ ಹಾಗೂ ಸಿಬ್ಬಂದಿ ವಿದ್ಯಾರ್ಥಿಯ ಆಯ್ಕೆಗಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.