ಬಾಗಲಕೋಟೆ : ಮೇ ೦೯ : ಕೃಷಿ ಕ್ಷೇತ್ರದಲ್ಲಿ ಮಕ್ಕಳ ಬಳಕೆಯನ್ನು ತಡೆಗಟ್ಟುವ ಹಾಗೂ ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಪ್ರಾಯೋಗಿಕ ಅಧ್ಯಯನಕ್ಕೆ ಬಾಗಲಕೋಟೆ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪ್ರಾಯೋಗಿಕ ಅಧ್ಯಯನ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೃಷಿ ಚಟುವಟಿಕೆಗಳಲ್ಲಿ ಮಕ್ಕಳ ತೊಡಗಿಸಿಕೊಳ್ಳುವಿಕೆ, ಅದರಿಂದಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಣಾಮಗಳು, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಜಾಗೃತಿ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕೆಲಸಗಳಲ್ಲಿ ಮಕ್ಕಳ ಬಳಕೆ ಕುರಿತು ಸಂಗ್ರಹಣೆ, ಸಮೀಕ್ಷೆ, ಪೋಷಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೂರು ವರ್ಷಗಳ ಈ ಯೋಜನೆ ಕುರಿತು ವಿಸ್ತೃತ ಕ್ರಿಯಾಯೋಜನೆ ರೂಪಿಸಿ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಪ್ರತಿನಿಧಿ ಜತೆ ನಿರಂತರ ಸಂಪರ್ಕದಲ್ಲಿಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಯೋಜನಾ ಸಂಯೋಜನ ಸಮನ್ವಯ ಅಧಿಕಾರಿ ರಂಜಿತ ಪ್ರಕಾಶ ಮಾತನಾಡಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಸಾಮಾಜಿಕ ನ್ಯಾಯ ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಮಾನವ ಮತ್ತು ಕಾರ್ಮಿಕ ಹಕ್ಕುಗಳನ್ನು ಉತ್ತೇಜಿಸಲು ಮೀಸಲಾಗಿರುವ ವಿಶೇಷ ಸಂಸ್ಥೆಯಾಗಿದೆ. ಯೋಗ್ಯ ಕೆಲಸವನ್ನು ಉತ್ತೇಜಿಸುವುದು, ಉತ್ಪಾದಕ, ಸುರಕ್ಷಿತ ಮತ್ತು ನ್ಯಾಯಯುತ ಕೆಲಸದ ವಾತಾವರಣಗಳನ್ನು ರಚಿಸುವತ್ತ ಗಮನಹರಿಸಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಡಿವಾಯ್.ಎಸ್.ಪಿ ಗಜಾನನ ಸುತಾರ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ, ರೇಷ್ಮೇ ಇಲಾಖೆಯ ಉಪನಿರ್ದೇಶಕ ಎಸ್.ಎಂ.ಕೋರೆ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಯೋಜನೆ ನಿರ್ದೇಶಕ ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.