ಬಳ್ಳಾರಿ, ಜೂ.29:. ಬಳ್ಳಾರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಜಪ್ತಿಯಾಗಿದ್ದ ಒಟ್ಟು 15.740 ಕೆ.ಜಿ. ಗಾಂಜಾವನ್ನು ನ್ಯಾಯಾಲಯಗಳ ಆದೇಶದಂತೆ ಶುಕ್ರವಾರ ವಿಲೇವಾರಿ ಮಾಡಿ ನಾಶಪಡಿಸಲಾಯಿತು.
ಹರಗಿನಡೋಣಿಯಲ್ಲಿರುವ ಸೂರ್ಯಕಾಂತ ಎನ್‌ವಿರಾನ್‌ಮೆಂಟ್ ಟೆಕ್ನಾಲಜೀಸ್ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ರೂ. 6,68,655 ಮೌಲ್ಯದ ಗಾಂಜಾವನ್ನು ಜಿಲ್ಲಾ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸಮ್ಮುಖದಲ್ಲಿ ನಾಶಪಡಿಸಲಾಯಿತು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಅಧ್ಯಕ್ಷೆ ಡಾ. ಸುಮನ್ ಡಿ. ಪೆನ್ನೇಕರ್ (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಎಎನ್‌ಟಿಎಫ್ ನೋಡಲ್ ಅಧಿಕಾರಿ ಎನ್. ನವೀನ್ ಕುಮಾರ್, ಡಿಎಸ್‌ಪಿ ವಿ. ಗೋವಿಂದ ರಾಜುಲು, ಡಿಎಸ್‌ಪಿ ಪಿ. ಮುರಳಿಧರ ಹಾಗೂ ಜಿಲ್ಲಾ ಮಟ್ಟದ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ನೋಡಲ್ ಅಧಿಕಾರಿ ಪಿಎಸ್‌ಐ ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪ್ತಿಯಾಗಿದ್ದ ಮಾದಕ ವಸ್ತುಗಳನ್ನು ನ್ಯಾಯಾಲಯಗಳ ನಿರ್ದೇಶನದಂತೆ ಸುರಕ್ಷಿತವಾಗಿ ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪನ್ನೇಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.