ಸಂಕೇಶ್ವರ: ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಉದ್ದೇಶದಿಂದ ಪದವಿಗಳಿಸದೇ, ನೈಪುಣ್ಯತೆ, ಸೃಜನಶೀಲತೆ ಹಾಗೂ ತಮ್ಮಲಿರುವ ಹೊಸ ಆಲೋಚನೆಗಳನ್ನು ಬಳಸಿಕೊಂಡು ಸಮಾಜದಲ್ಲಿ ಪರಿವರ್ತನೆ ತರಲು ಪ್ರಯತ್ನಿಸಬೇಕು ಎಂದು ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಡಾ. ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ನಿಡಸೋಸಿಯ ಎಸ್‌ಜೆಪಿಎನ್ ಟ್ರಸ್ಟ್‌ನ ವಿಜ್ಞಾನ, ವಾಣಿಜ್ಯ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್ಸ್ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಯಾವುದೇ ಸಾಧಕನ ಯಶಸ್ಸಿನ ಹಿಂದೆ ಕೇವಲ ಶೈಕ್ಷಣಿಕ ಅರ್ಹತೆ ಮಾತ್ರವಲ್ಲದೆ ದೃಢ ಸಂಕಲ್ಪ, ಪರಿಶ್ರಮ ಹಾಗೂ ಸಾಹಸ ಮನೋಭಾವವೂ ಪ್ರಮುಖ ಪಾತ್ರ ವಹಿಸುತ್ತವೆ. ಪದವಿ ಎನ್ನುವುದು ಕೇವಲ ಜ್ಞಾನದ ಮುದ್ರೆ ಮಾತ್ರವಲ್ಲ, ಅದು ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ದಾರಿದೀಪವಾಗಬೇಕು. ಆತ್ಮವಿಶ್ವಾಸ, ಶಿಸ್ತು ಹಾಗೂ ಗುರಿ ಸಾಧಿಸುವ ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ. ಬಿ. ಸಂಗೋಟಿ ಮಾತನಾಡಿ, ಇಂದಿನ ಪೈಪೋಟಿಯ ಯುಗದಲ್ಲಿ ತಾಂತ್ರಿಕ ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳೂ ಅತ್ಯಂತ ಅಗತ್ಯವಾಗಿವೆ. ವಿದ್ಯಾರ್ಥಿಗಳು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ಶಿಕ್ಷಣದ ನಿಜವಾದ ಅರ್ಥ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯ ಉಮೇಶ ನಾಯಿಕ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯಪಾಲನೆ ಹಾಗೂ ನಾಯಕತ್ವದ ಗುಣಗಳು ಅತ್ಯಂತ ಮಹತ್ವದ್ದಾಗಿವೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಿರಂತರ ಅಧ್ಯಯನ ಮತ್ತು ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು.
ಬಿಸಿಎ-168, ಬಿ.ಕಾಮ್-67, ಬಿಎಸ್ಸಿ-25 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇತ್ತೀಚೆಗೆ ಕ್ಯಾಂಪಸ್ ಸಂದರ್ಶನದ ಮೂಲಕ ವಿವಿಧ ಉದ್ಯೋಗಗಳಿಗೆ ಆಯ್ಕೆಯಾದ ಮಹಾವಿದ್ಯಾಲಯದ 213 ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಪ್ರಾಚಾರ್ಯ ಬಸವರಾಜ ಹಾಲಬಾವಿ ಸ್ವಾಗತಿಸಿದರು. ಪ್ರೀತಿ ಚಿಲಮಿ ಹಾಗೂ ವೀಣಾ ಹುಗ್ಗಿ ನಿರೂಪಿಸಿದರು. ಪ್ರೊ. ಮಹಾಂತೇಶ ಪಾಟೀಲ ವಂದಿಸಿದರು.