Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅವಧೂತ ಪರಂಪರೆಯ ಸಂತ ನವಿಲಗುಂದ ನಾಗಲಿಂಗ

ದಿ. ೨೯-೦೬-೨೦೨೫ ರಂದು ನವಿಲಗುಂದದಲ್ಲಿ ನಡೆಯಲಿರುವ ಪುಣ್ಯಾರಾಧನೆ ನಿಮಿತ್ತ

ಎರಡು ನೂರು ವರ್ಷಗಳ ಹಿಂದೆ ಆಗಿ ಹೋದ ಮಹಾ ಸಂತ ಪರಂಪರೆಯಲ್ಲಿ ಶಿಶುನಾಳ ಶರೀಫಸಾಹೇಬ, ಹುಬ್ಬಳ್ಳಿಯ ಸಿದ್ಧಾರೂಢ, ಗರಗದ ಮಡಿವಾಳಪ್ಪ, ನವಿಲಗುಂದ ನಾಗಲಿಂಗ, ಕಳಸದ ಗುರುಗೋವಿಂದ ಭಟ್ಟ ಹೊಸಳ್ಳಿ ಬೂದೀಶ್ವರ ಸ್ವಾಮಿಗಳು ಮುಂತಾದ ಮಹನೀಯರ ಹೆಸರುಗಳು ಅಗ್ರಸಾಲಿನಲ್ಲಿ ನಿಲ್ಲುತ್ತವೆ. ಇವರು ಸಂಸಾರದಹುತ್ತದಲ್ಲಿ ಸಿಕ್ಕು ಒದ್ದಾಡಿದವರಲ್ಲ ಅವಧೂತ ಪರಂಪರೆಯಲ್ಲಿ ಬಾಳಿ ಸರ್ವಧರ್ಮ ಸಮನ್ವಯತೆಗೆ ಶ್ರಮಿಸಿ ಕರ್ಪೂರದಂತೆ ಉರಿದು ತಮ್ಮ ಅಸ್ತಿತ್ವಕ್ಕಾಗಿ ಮಠ ಮಾನ್ಯ ಕಟ್ಟಿ ಮೆರೆಯದೆ ಸರಳತೆಯ ಸಾಕಾರಮೂರ್ತಿಗಳಾಗಿ ಜನರ ನೋವು ನಲಿವುಗಳಿಗೆ ಸ್ಪಂದಿಸಿ ಜನಮನದಲ್ಲಿ ಶಾಶ್ವತವಾಗಿ ಉಳಿದವರು, ಉಂಡರೆ ಉಣ್ಣುವರು, ಇಲ್ಲವಾದರೆ ಇಲ್ಲ. ನಿದ್ರಿಸಿದರೆ ನಿದ್ದೆಮಾಡುವರು ಇಲ್ಲವಾದರೆ ಜಾಗೃತರಾಗಿ ಅಲೆಯುವರು, ಧ್ಯಾನಸ್ಥಿತಿಯಲ್ಲಿ ಜಗತ್ತಿನ ಆಗು ಹೋಗುಗಳನ್ನು ಗ್ರಹಿಸಬಲ್ಲ ತ್ರಿಕಾಲಜ್ಞಾನಿಗಳು ಇವರು. ಇವರಿಗೆ ಜಾತಿ ಬಂಧನವಿಲ್ಲ, ಅಂತಸ್ತು ಐಶ್ವರ್ಯಗಳ ತಾರತಮ್ಯವಿಲ್ಲ. ನಿಷ್ಕಾಮ, ನಿರಹಂಕಾರ, ನಿರಪೇಕ್ಷ ಗುಣಗ್ರಾಹಿಗಳಾಗಿ ನಂಬಿದ ಭಕ್ತರಿಗೆ ಒಳಿತನ್ನೇ ಬಯಸಿ ಆಶೀರ್ವದಿಸಿ ಇಂದಿಗೂ ಭಕ್ತ ಜನರ ದೃಷ್ಟಿಯಲ್ಲಿ ಲೀಲಾಮೂರ್ತಿಗಳಾಗಿ, ಅದೃಶ್ಯ ಶಕ್ತಿಗಳಾಗಿ ಜನಸಮೂಹದಲ್ಲಿ ಭಕ್ತಿಯ ಮಹಾಪೂರ ಉಕ್ಕಿ ಹರಿಯಲು ಕಾರಣೀಭೂತರಾದವರು. ಇವರು ಇಂದು ಭೌತಿಕವಾಗಿ ಇಲ್ಲದೇ ಹೋದರೂ ಅವರು ಸಮಾಧಿ ಹೊಂದಿದ ಸ್ಥಳಗಳು ಭಾವೈಕ್ಯದ ತವರೂರಾಗಿ, ಭಕ್ತಿ ಭಾವದ ಶಕ್ತಿಕೇಂದ್ರಗಳಾಗಿ, ಸೌಹಾರ್ದದ ನೆಲೆಬೀಡಾಗಿ ಉಳಿದುಕೊಂಡಿವೆ. ಅವುಗಳಿಗೆ ಭಕ್ತಸಾಗರ ಸದಾ ಹರಿದು ಬಂದು ದರ್ಶನಭಾಗ್ಯ ಪಡೆದು ಜನ್ಮಸಾರ್ಥಕ್ಯದ ಧನ್ಯತಾಭಾವ ಅನುಭವಿಸುವಂತಾಗಿದೆ. ಇವರೆಲ್ಲ ಹಸಿವು ತೃಷೆ ನಿಗ್ರಹಿಸಿ ಮಹಾಯೋಗಿಗಳಂತೆ ಬಾಳಿದವರು. ಗೋಡಂಬಿ, ಸೇಬು ತಿಂದು ಮಿರಿ ಮಿರಿ ಮಿಂಚುತ್ತ, ಗರಿ ಗರಿ ಕಾವಿ ತೊಟ್ಟು ಮೆರೆದವರಲ್ಲ. ಇಂಥ ಮಹಾ ಸಂತ ಪರಂಪರೆಯಲ್ಲಿ ಆಗಿ ಹೋದ ಮಹಾನ್ ಯೋಗಿ, ಪವಾಡ ಪುರುಷ ನವಿಲಗುಂದ ನಾಗಲಿಂಗಪ್ಪನವರು ಒಬ್ಬರಾಗಿದ್ದಾರೆ. ವಿಚಿತ್ರ ವೇಶ, ವಿಚಿತ್ರ ನಡೆ ಇವು ಅವಧೂತರ ಲಕ್ಷಣಗಳು.

ಧಾರವಾಡ ಜಿಲ್ಲೆಯ ನವಿಲಗುಂದ ಪಟ್ಟಣದಲ್ಲಿ ನಾಗಲಿಂಗ ಮಹಾಸ್ವಾಮಿಗಳ ಮಠ ಇದೆ. ಇಲ್ಲಿ ಇವರು ಸಮಾಧಿಕೂಡ ಇದೆ. ಪ್ರತಿ ವರ್ಷ ಇವರು ಮಹಾನಿರ್ವಾಣ ಹೊಂದಿದ ದಿನವನ್ನು ಮಣ್ಣೆತ್ತಿನ ಅಮವಾಸೆ ನಂತರ ಚತುರ್ಥಿಯಂದು ಪುಣ್ಯಾರಾಧನೆ ಎಂಬ ಹೆಸರಿನಲ್ಲಿ ಬಹಳ ಸಡಗರದಿಂದ ಆಚರಿಸಲಾಗುತ್ತದೆ. ದಿನಾಂಕ ೨೯.೬.೨೦೨೫ ರಂದುನವಿಲಗುಂದದಲ್ಲಿ ನಾಗಲಿಂಗಪ್ಪನವರ ಪುಣ್ಯಾರಾಧನೆ ನಡೆಯಲಿದೆ. ಏತನ್ಮಧ್ಯ ಅನೇಕ ಧಾರ್ಮಿಕ, ಭಕ್ತಿ, ಶ್ರದ್ಧಾ ಕಾರ್ಯಕ್ರಮ ನಡೆಯುತ್ತವೆ. ಅಸಂಖ್ಯಾತ ಭಕ್ತರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಧನ್ಯತಾಭಾವ ಅನುಭವಿಸುತ್ತಾರೆ.
ಶ್ರೀ ನಾಗಲಿಂಗಪ್ಪನವರು ವಿಶ್ವಕರ್ಮ ಕುಲಸಂಜಾತರು ಮೂಲಭೂತವಾಗಿ ಕರ್ಮಯೋಗಿಗಳು. ಸಮಾಜದ ಅಂದರೆ ಕೇವಲ ವಿಶ್ವಕರ್ಮ ಸಮಾಜವಲ್ಲ ನಾಡಿನ ಸಮಸ್ತ ಮನುಕುಲದ ಆಧ್ಯಾತ್ಮಿಕ ಉದ್ಧಾರಕ್ಕಾಗಿ ಪ್ರಯತ್ನಿಸಿದವರು. ಮಾತು ಬೆಂಕಿಯ ಉಂಡೆಯಂತಾದವರೂ ಹೃದಯ ಹೂವಿಗಿಂತ ಮಧುರ. ಅಂತೆಯೇ ಭೀಮವ್ವೆಯಂತಹ ಅಸ್ಪೃಶ್ಯಳನ್ನು ಉದ್ಧರಿಸಿ ಅವಳಲ್ಲಿ ಮಾತೃ ದೇವತೆಯ ಸ್ವರೂಪ ಕಂಡವರು. ಅವಳಿಗೆ ಮುಕ್ತಿಮಾರ್ಗತೋರಿದ ಮಹಿಮಾನ್ವಿತರು.
ನಾಗಲಿಂಗ ಮಹಾ ಸ್ವಾಮಿಗಳು ರಾಯಚೂರ ಜಿಲ್ಲೆಯ ಮಾನ್ವಿ ತಾಲೂಕಿನ ಜಾವಳಗೇರಿ ಎಂಬ ಗ್ರಾಮದಲ್ಲಿ ವಿಶ್ವಕರ್ಮ ದಂಪತಿಗಳಾದ ಮೋನಪ್ಪ ಮತ್ತು ನಾಗಮ್ಮನವರ ಗರ್ಭದಲ್ಲಿ ಶ್ರಾವಣ ಮಾಸದ ಶುಕ್ಲ ಪಕ್ಷದ ಪೌರ್ಣಿಮೆದಿನ ಜನಿಸಿದರು. ಐದು ಆರು ವರ್ಷಗಳ ತನಕ ಹೆತ್ತವರ ಪಾಲನೆಯಲ್ಲಿದ್ದು ಕೆಲ ಮಟ್ಟಿನ ಅಕ್ಷರ ವಿದ್ಯೆ ಸಂಪಾಧಿಸಿದ ನಾಗಲಿಂಗಪ್ಪನವರು ಮನೆ ಮಠ ತೊರೆದು ಲೋಕಸಂಚಾರಗೈದು ಅನುಭಾವಿಯಾಗಿ, ತಪಸ್ವಿಯಾಗಿ ಪರಿವರ್ತನೆ ಹೊಂದಿ ಜನರ ಕಲ್ಯಾಣಕ್ಕಾಗಿ ಬಾಳತೊಡಗಿದರು. ಹೆತ್ತವರಿಂದಲೇ ಭಿಕ್ಷೆ ಬೇಡಿ ಸನ್ಯಾಸಿಯಾಗಿ ಲೋಕಸಂಚಾರಕ್ಕೆ ಹೊರಟರು, ದೇಶದ ತುಂಬ ಆಗಲೇ ನಾಗಲಿಂಗಪ್ಪನವರ ಮಹಿಮೆ ಹಬ್ಬತೊಡಗಿತ್ತು.
ಚಿದಾನಂದಾವಧೂತರ ಜ್ಞಾನಸಿಂಧು, ದೇವಿ ಪುರಾಣ, ಚಾಮರಸನ ಪ್ರಭುಲಿಂಗಲೀಲೆ ಮುಂತಾದ ಗ್ರಂಥಗಳ ಅಧ್ಯಯನ ಮಾಡಿ ರೋಣ, ಗದುಗು, ವರವಿ ಮುಂತಾದ ಕಡೆ ಸಂಚರಿಸುತ್ತ ನವಿಲಗುಂದಕ್ಕೆ ಬಂದು ಅಲ್ಲಿಯ ಮೌನೇಶ್ವರ ಮಠದಲ್ಲಿ ವಾಸಿಸತೊಡಗಿದರು. ಅದಾಗಲೇ ಇವರು ವೇದಾಂತ, ಆಧ್ಯಾತ್ಮ, ಲೋಕಜ್ಞಾನಗಳ ಗಾಢ ಅನುಭವದಿಂದ ಶರಣರಾಗಿ ಖ್ಯಾತಿಪಡೆದಿದ್ದರು. ನವಿಲಗುಂದದಲ್ಲಿ ಇರುವಾಗ ಜ್ವರ ಬಾಧೆಯಿಂದ ಬಳಲಿದಾಗ ಇವರ ಸೇವೆಗೈದ ಸಮಗಾರ ಭೀಮವ್ವೆಯ ಭಕ್ತಿಗೆ ಮೆಚ್ಚಿ ಅವಳಿಗೆ ಸಂಸ್ಕಾರ ನೀಡಿ ಪರಮ ಭಕ್ತಿಯ ಮುಕ್ತಿಮಾರ್ಗ ತೋರಿಸಿದರು. ಇಂದಿನ ದಲಿತೋದ್ಧಾರ, ಹಿಂದೆಯೆ ನಾಗಲಿಂಗ ಶರಣರು ಇಂಥ ಕ್ರಾಂತಿಯನ್ನು ಸದ್ದು ಗದ್ದಲವಿಲ್ಲದೆ ಮಾಡಿದ್ದನ್ನು ಗಮನಿಸಬೇಕು.

ಲೀಲಾಪುರುಷ ಎಂಬ ಬಿರುದು ನಾಗಲಿಂಗಪ್ಪನವರಿಗೆ ಇದೆ ಮಹಾಪುರುಷರಿಗೆ ಇಂಥ ಬಿರುದುಗಳಿರುವುದು ಅಚ್ಚರಿಯ ಸಂಗತಿಯಲ್ಲ. ಅಥವಾ ಕೇವಲ ಪವಾಡಗಳಿಂದ ಯಾವುದೇ ಸಂತ ಸಾಧುಗಳು ಮಹಾತ್ಮರೆನಿಸುವದಿಲ್ಲ. ಪವಾಡ ಎಂಬುದು ಆತ್ಮಶುದ್ಧಿಯಿಂದ ಜನಕಲ್ಯಾಣಕ್ಕಾಗಿ ಮಾಡಿದ ಸೇವೆಯ ಒಂದು ಪ್ರಕಾರ ಎಂಬುದನ್ನು ಮರೆಯಬಾರದು. ನಿಸ್ವಾರ್ಥದಿಂದ ಮಾಡುವ ಮಹಾತ್ಮರ ಪ್ರತಿಯೊಂದು ಕಾಯಕವೂ ಪವಾಡವೆನಿಸುತ್ತದೆ. ಇದನ್ನೇ ಚಿದಾನಂದಾವಧೂತರು ದೇವಿ ಮಹಾತ್ಮೆಯಲ್ಲಿ ಆದಿಶಕ್ತಿ ಶುಂಭನಿಗೆ ಹೇಳುವ ನುಡಿಯಲ್ಲಿ ಕಾಣಬಹುದಾಗಿದೆ. ದುಷ್ಟ ಉದ್ದೇಶದಿಂದ ದುಷ್ಟ ಕಾಯಕದಲ್ಲಿ ತೊಡಗಿದವರಿಗೆ ಜಗತ್ತು ದುಷ್ಟವಾಗಿ ಕಾಣುತ್ತದೆ. ಶಿಷ್ಟಮಾರ್ಗದಲ್ಲಿ ಸಾಗಿ ಸರ್ವರಲ್ಲೂ ಒಳ್ಳೆಯದನ್ನು ಕಾಣುವವರಿಗೆ ಜಗತ್ತು ಒಳ್ಳೆಯದಾಗಿ ಕಾಣುತ್ತದೆ ಎಂದು ಶ್ರೀ ಆದಿಶಕ್ತಿ, ಶುಂಭನಿಗೆ ಹೇಳುತ್ತಾಳೆ, ಈ ಮಾತು ತ್ರಿಕಾಲ ಸತ್ಯ. ಇದನ್ನೆ ರಾಷ್ಟ್ರಕವಿ ಕುವೆಂಪು ಅವರು ಆನಂದ ಮಯ ಈ ಜಗ ಹೃದಯ ಏತಕೆ ಭಯ ಮಾಣೋ ಎಂದಿದ್ದಾರೆ. ಆನಂದದಿಂದ ಕೂಡಿದ ಜಗತ್ತಿನಲ್ಲಿ ಕೆಟ್ಟವಿಚಾರಗಳಿಂದ ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂಬುದು ಈ ಕವಿವಾಣಿಯ ತಾತ್ಪರ್ಯ. ಮಹಾಮಹಿಮರ ಪವಾಡಗಳನ್ನು, ಲೀಲೆಗಳನ್ನು ನಾವು ಇದೇ ಅರ್ಥದಲ್ಲಿ ಗ್ರಹಿಸಬೇಕು.

ಹೀಗೆ ಲೀಲಾ ವಿನೋದಿಯಾಗಿ ತೇಜೋಮೂರ್ತಿ ಅವಧೂತ ನಾಗಲಿಂಗ ಸ್ವಾಮಿಗಳು ವಿಜಾಪೂರ, ಧಾರವಾಡ, ರಾಯಚೂರ, ಬೆಳಗಾವಿ ಇತ್ಯಾದಿ ಸ್ಥಳಗಳಲ್ಲದೆ ಕರ್ನಾಟಕ, ಆಂಧ್ರ, ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಸಂಚಾರ ಮಾಡಿ ಜನರಲ್ಲಿನ ಅಂಧ ವಿಚಾರಗಳನ್ನು ಬಡಿದೋಡಿಸಿ ಜಾಗೃತಿ ಮೂಡಿಸಿ, ಯೋಗ ವೇದಾಂತಗಳ ಬಗ್ಗೆ ಉಪದೇಶ ನೀಡಿ ಸಾತ್ವಿಕರಿಗೆ ಅಭಯವನ್ನು, ದುರ್ಮಾರ್ಗಿಗಳಿಗೆ ದಂಡನೆ, ಬುದ್ಧಿವಾದ ಹೇಳಿ ಲೋಕೋದ್ಧಾರಕ್ಕೆ ಶ್ರಮಿಸಿದರು. ಇವರು ಗದಗ ಬೆಟಗೇರಿಗೆ ಅನೇಕ ಸಲ ಬಂದು ಹೋದ ಬಗ್ಗೆ ಇಂದಿಗೂ ಜನರ ಬಾಯಿಂದ ತಲೆತಲಾಂತರಗಳಿಂದ ಐತಿಹ್ಯಗಳು ಕೇಳಿಬರುತ್ತವೆ. ಇವರು ಬಂದು ಹೋದ ಕುರುಹಾಗಿ ಬೆಟಗೇರಿ ತೆಗ್ಗಿನಪೇಟೆ ಕಬಾಡಿ ರಸ್ತೆಯಲ್ಲಿ ನಾಗಲಿಂಗಪ್ಪ ಮಠ ಇರುವುದನ್ನು ಇಂದಿಗೂ ಕಾಣಬಹುದು ಅಲ್ಲದೇ ನಾಗಲಿಂಗಪ್ಪನವರು ಗದಗ ಬೆಟಗೇರಿಯ ಅನೇಕರ ಮನೆಗಳಿಗೆ ಭೇಟಿ ನೀಡಿ ಆಶೀರ್ವದಿಸಿದ್ದಾರೆ. ಕೊನೆಗೆ ನವಿಲಗುಂದಕ್ಕೆ ಬಂದು ಇಲ್ಲಿ ಸಮಾಧಿ ಹೊಂದಿದರು. ಪಲ್ಲಕ್ಕಿಯಲ್ಲಿ ಮೆರೆದ ಜರತಾರಿ ಜಗದ್ಗುರುವಾಗದೇ ಸಿದಿಗೆಯನ್ನೇ ಪಲ್ಲಕ್ಕಿಯಾಗಿಸಿ ಮೆರೆದ ಮಹಾನುಭಾವ ನಾಗಲಿಂಗಪ್ಪನವರು ಸರ್ವ ಜನಾಂಗದ ಪ್ರೀತಿಗೆ ಪಾತ್ರರಾದರು.

-ಡಿ.ವಿ. ಬಡಿಗೇರ, ಸಾಹಿತಿ, ಗದಗ
ಮೊ : ೯೪೪೯೭೦೨೪೯
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ