ಬಳ್ಳಾರಿ: ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಬಳ್ಳಾರಿ ತಾಲ್ಲೂಕಿನ ಚರಕುಂಟೆ ಗ್ರಾಮದ ಯುವಕರು ಹಾಗೂ ಅಭಿಮಾನಿಗಳು ವಿಶಿಷ್ಟವಾಗಿ ಸಂಭ್ರಮಾಚರಣೆ ನಡೆಸಿದರು.
ಗ್ರಾಮದ ಸಮೀಪದ ಕಣೇಕಲ್ಲು ರಸ್ತೆಯಲ್ಲಿ ಶಾಮಿಯಾನ ಹಾಕಿ, ರಸ್ತೆ ಸಂಚಾರಿಗರು ಹಾಗೂ ಸಾರ್ವಜನಿಕರಿಗೆ ತಂಪಾದ ಮಜ್ಜಿಗೆ ವಿತರಿಸುವ ಮೂಲಕ ತಂಡದ ಗೆಲುವಿನ ಸಂತಸವನ್ನು ಹಂಚಿಕೊಂಡರು. ಬೇಸಿಗೆಯ ಬಿಸಿಲಿನ ನಡುವೆಯೂ ನೂರಾರು ಜನರಿಗೆ ಮಜ್ಜಿಗೆ ನೀಡಲಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಯುವಕರ ಕಾರ್ಯವನ್ನು ಶ್ಲಾಘಿಸಿದರು.
ಆರ್‌ಸಿಬಿ ತಂಡದ ವಿಜಯದಿಂದ ಹರ್ಷಗೊಂಡ ಅಭಿಮಾನಿಗಳು ಸಂಭ್ರಮಾಚರಣೆಯ ಜೊತೆಗೆ ಸಾಮಾಜಿಕ ಸೇವೆಯನ್ನೂ ಕೈಗೊಂಡರು. ನೀರಿನ ಡ್ರಮ್‌ಗಳಲ್ಲಿ ಮಜ್ಜಿಗೆ ತಯಾರಿಸಿ ದಾರಿಹೋಕರಿಗೆ ವಿತರಿಸಿದರು. ಮಜ್ಜಿಗೆ ಸೇವಿಸಿದ ಸಾರ್ವಜನಿಕರು ತಂಡಕ್ಕೆ ಶುಭ ಹಾರೈಸಿ, ಯುವಕರ ಸೇವಾ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಿರುಮಲ, ವಿಶ್ವನಾಥ, ರಾಘವೇಂದ್ರ, ಪ್ರಸಾದ್, ಮಾರುತಿ, ಆದಿ, ಸುನೀಲ್, ಅಶೋಕ್, ಮೇಘರಾಜ್, ತಿಲಕ್, ರಿತೇಶ್, ಶಂಕರಪ್ಪ, ಆದರ್ಶ್, ಅಭಿ, ಗೋವರ್ಧನ್, ಹೇಮಂತ್ ಸೇರಿದಂತೆ ಚರಕುಂಟೆ ಗ್ರಾಮದ ಅನೇಕ ಆರ್‌ಸಿಬಿ ಅಭಿಮಾನಿಗಳು ಭಾಗವಹಿಸಿದ್ದರು.
