ಬಳ್ಳಾರಿ, ಏ.23:.. ನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಗೇಟ್ ಬಳಿ ನೆರಳಿನ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಇಂದು ಮಧ್ಯಾಹ್ನ ಸುಮಾರು 1.30ರ ವೇಳೆಗೆ ರೈಲ್ವೆ ಗೇಟ್ ಮುಚ್ಚಿದ ಸಂದರ್ಭದಲ್ಲಿ, ಗೇಟ್ ಬಳಿ ನಿಂತಿದ್ದ ವಾಹನ ಸವಾರರು ಬಿಸಿಲಿನ ತಾಪಕ್ಕೆ ತುತ್ತಾಗುತ್ತಿರುವುದು ಗಮನಕ್ಕೆ ಬಂದಿದ್ದು. ರೈಲ್ವೆ ಗೇಟ್ ಮುಚ್ಚಿದಾಗ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸುಮಾರು 10ರಿಂದ 15 ನಿಮಿಷಗಳ ಕಾಲ ನಿಲ್ಲಬೇಕಾಗುತ್ತದೆ. ಆದರೆ ಈ ಅವಧಿಯಲ್ಲಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಯಾವುದೇ ರೀತಿಯ ನೆರಳಿನ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ವಿಶೇಷವಾಗಿ ಮಕ್ಕಳು, ವಯೋವೃದ್ಧರು ಹಾಗೂ ಮಹಿಳೆಯರು ಬಿಸಿಲಿನ ತೀವ್ರತೆಗೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ದಿನೇದಿನೇ ಹೆಚ್ಚುತ್ತಿರುವ ಉಷ್ಣಾಂಶದ ಹಿನ್ನೆಲೆ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆದ್ದರಿಂದ ಸಂಬಂಧಿತ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು, ಕಂಟೋನ್ಮೆಂಟ್ ರೈಲ್ವೆ ಗೇಟ್ ಬಳಿ ತಾತ್ಕಾಲಿಕವಾಗಿಯಾದರೂ ಶೆಡ್ ಅಥವಾ ಮರ ನೆಡುವ ಮೂಲಕ ನೆರಳಿನ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರನ್ನು ಬಿಸಿಲಿನಿಂದ ರಕ್ಷಿಸುವಂತೆ ಒತ್ತಾಯಿಸಲಾಗಿದೆ.