ಬಳ್ಳಾರಿ: 23..:ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ನಗರದ ರಾಯಲ್ ಸರ್ಕಲ್ ನಲ್ಲಿ ದ್ವಿ ಭಾಷಾ ನೀತಿ ಹೆಸರಿನಲ್ಲಿ ಇಂಗ್ಲಿಷ್ ಮಾಧ್ಯಮ ಹೇರಿಕೆ ವಿರುದ್ಧ ರಾಯಲ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರು ಕೆ ಈರಣ್ಣ ಅವರು ಮಾತನಾಡಿ... ರಾಜ್ಯದ 5000 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವನ್ನು ಆರಂಭಿಸಲು ರಾಜ್ಯ ಸರ್ಕಾರವು ಆದೇಶಿಸಿದೆ. ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರಿ ಶಾಲೆ ಶಿಕ್ಷಕರಿಗೆ ಆಂಗ್ಲ ಮಾಧ್ಯಮ ತರಬೇತಿ ನೀಡಲಾಗುತ್ತಿದೆ. ಸರ್ಕಾರವು ಇದನ್ನು ದ್ವಿಭಾಷಾ ಮಾಧ್ಯಮ ಎಂದು ಕರೆಯುತ್ತಿದ್ದರೂ ಇಂಗ್ಲಿಷಿನಲ್ಲೇ ಪಾಠ ಮಾಡಬೇಕೆಂದು ಹಲವೆಡೆ ಶಿಕ್ಷಕರಿಗೆ ನಿರ್ದೇಶನ ನೀಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ 174 ಶಾಲೆಗಳಲ್ಲಿ ಜೂನ್ ನಿಂದ ಕನ್ನಡ ಮಾಧ್ಯಮ ಇರುವುದಿಲ್ಲ, ಬದಲಿಗೆ ಕೇವಲ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ನೀಡಲಾಗುವುದೆಂದು ಪಾಲಕರಿಗೆ ತಿಳಿಸಲಾಗಿದೆ. ಇದು ಅಕ್ಷಮ್ಯ! ಸರ್ಕಾರದ ಈ ನಡೆಯನ್ನು ಖಂಡಿಸಿದರು.
ಮಗುವಿನ ಸಮರ್ಪಕ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕೆ ಕನಿಷ್ಠ 5ನೇ ತರಗತಿವರೆಗೂ ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯಬೇಕು. ಸಂವಹನದ ಭಾಷೆಯೇ ಕಲಿಕೆಯ ಭಾಷೆಯಾದಾಗ ಮಗುವು ತನ್ನ ಭಾವನೆಯನ್ನು ಸಮರ್ಪಕವಾಗಿ ವ್ಯಕ್ತಪಡಿಸಲು ಮತ್ತು ವಿಷಯಗಳನ್ನು ಗ್ರಹಿಸಲು ಸಹಾಯಕವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಈ ಅಭಿಪ್ರಾಯವನ್ನು ಸರ್ಕಾರ ಗಾಳಿಗೆ ತೂರಿದೆ. ಕೂಡಲೇ ಈ ಅವೈಜ್ಞಾನಿಕ ನಿರ್ಧಾರವನ್ನು ಹಿಂಪಡೆಯುವಂತೆ ಎಐಡಿಎಸ್ಓ ಆಗ್ರಹಿಸುತ್ತದೆ ಎಂದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸಲಹೆಗಾರರು ಮತ್ತು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರು ಆರ್.ಸೋಮಶೇಖರ್ ಅವರು ಮಾತನಾಡುತ್ತಾ... ಸರ್ಕಾರವು ಅತ್ಯಂತ ಅಪ್ರಜಾತಾಂತ್ರಿಕವಾಗಿ ಕರ್ನಾಟಕದ ವಿದ್ಯಾರ್ಥಿಗಳಿಂದ ಕನ್ನಡ ಭಾಷೆಯನ್ನೇ ಕಿತ್ತುಕೊಳ್ಳುತ್ತಿದೆ. ಇಂಗ್ಲಿಷ್ ಕಲಿಕೆ ಅವಶ್ಯಕ ನಿಜ. ಆದರೆ ಕನ್ನಡವನ್ನು ಕೊಂದು ಇಂಗ್ಲಿಷ್ ಕಲಿಸಲು ಹೊರಟಿರುವುದು ನಾಡಿನ ಜನತೆಗೆ ಮಾಡಿರುವ ದ್ರೋಹ ಹಾಗೂ ಕನ್ನಡಕ್ಕೆ ಮಾಡಿರುವ ಅಪಚಾರ. ನಾಡಿನ ವಿದ್ಯಾರ್ಥಿಗಳು, ಯುವಜನರು, ಪೋಷಕರು, ಸಾಹಿತಿಗಳು ಹಾಗೂ ಶಿಕ್ಷಣ ಪ್ರೇಮಿ ಜನತೆ ಕನ್ನಡವನ್ನು ರಕ್ಷಿಸಲು ನಾಗರಿಕ ಜನರು ಧ್ವನಿಯತ್ತಬೇಕೆಂದರು.
ಪ್ರತಿಭಟನೆಯ ಅಧ್ಯಕ್ಷತೆ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷರು ಎಂ.ಶಾಂತಿ ವಹಿಸಿದ್ದರು. ಹಾಗೆ ಈ ವೇಳೆ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಉಪಾಧ್ಯಕ್ಷರಾದ ಗುರಳ್ಳಿ ರಾಜ, ಜೆ.ಸೌಮ್ಯ ಮತ್ತು ಗೌರಮ್ಮ, ಮಹಾಲಕ್ಷ್ಮೀ, ಭಾರತಿ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.