ಬಳ್ಳಾರಿ, ಮೇ 2: ಮಾನವೀಯತೆಯನ್ನು ಮೈಗೂಡಿಸಿಕೊಂಡು ಸಮಾಜದ ವಿವಿಧ ಸಮುದಾಯಗಳ ಬಡಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಪ್ರತಿಫಲಾಪೇಕ್ಷೆಯಿಲ್ಲದೇ ನಿಷ್ಕಲ್ಮಶ ಮನಸ್ಸಿನಿಂದ ಸಾರ್ಥಕ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ ಡಾ|| ಪೂರ್ಣಿಮ ಎಸ್. ಕಟ್ಟಿಮನಿ ಅವರು ತಮ್ಮ ಕುಟುಂಬಕ್ಕೂ ಹಾಗೂ ಹೊಸ ಎರ್ರಗುಡಿ ಗ್ರಾಮಕ್ಕೂ ಕೀರ್ತಿಯನ್ನು ತಂದಿದ್ದಾರೆ ಎಂದು ವಾಲ್ಮೀಕಿ ಸಮುದಾಯದ ಯುವ ಮುಖಂಡ ನಿಟ್ರವಟ್ಟಿ ಸೋಮಣ್ಣ ಹೇಳಿದರು.
ನಗರದ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ, ಸೇವೆಯಿಂದ ನಿವೃತ್ತರಾದ ಡಾ|| ಪೂರ್ಣಿಮ ಎಸ್. ಕಟ್ಟಿಮನಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿದ ಅವರು, ಬಡಜನತೆಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಜನಪ್ರಿಯ ವೈದ್ಯೆಯಾಗಿದ್ದ ಅವರು ದೀರ್ಘಕಾಲ ಸೇವೆ ಸಲ್ಲಿಸಿ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ವೈದ್ಯಕೀಯ, ಶಿಕ್ಷಣ ಹಾಗೂ ನ್ಯಾಯಾಂಗ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ತಮ್ಮ ವೃತ್ತಿಯಲ್ಲಿ ಹೊಸ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಂಡು ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. “ಜನಸೇವೆಯೇ ಜನಾರ್ಧನ ಸೇವೆ” ಎಂಬ ಹಿತೋಕ್ತಿಯಂತೆ ಕಾರ್ಯನಿರ್ವಹಿಸಿ ವೃತ್ತಿಯಲ್ಲಿ ತೃಪ್ತಿಯನ್ನು ಪಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿ. ಜಗನ್ನಾಥ ರೆಡ್ಡಿ, ಡಾ|| ಪೂರ್ಣಿಮ ಎಸ್. ಕಟ್ಟಿಮನಿ, ಡಾ|| ಸಂಕೀರ್ತರೆಡ್ಡಿ, ಜಿ. ಗೋವಿಂದಪ್ಪ, ಪ್ರಶಾಂತ್, ಚಂದ್ರ ಸೇರಿದಂತೆ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತರಾದ ಡಾ|| ಪೂರ್ಣಿಮ ಎಸ್. ಕಟ್ಟಿಮನಿ ಅವರ ವಿಶ್ರಾಂತಿ ಜೀವನ ಸುಖಕರವಾಗಿರಲೆಂದು ಎಲ್ಲರೂ ಹಾರೈಸಿದರು.