ತಾಳಿಕೋಟೆ, ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ೨೦೨೪-೨೫ನೇ ಸಾಲಿನ ಕ್ರಿಯಾ ಯೋಜನೆಯಡಿ ೧೮ ಲಕ್ಷ ವೆಚ್ಚದಲ್ಲಿ ಕಳೆದ ಒಂದು ತಿಂಗಳ ಹಿಂದೆ ನಿರ್ಮಿಸಿರುವ ಕಮಾನು ಗೇಟ್(ಆರ್‍ಚ್ ಗೇಟ್) ಕಾಮಗಾರಿಯನ್ನು ಕಳಪೆ ಮಟ್ಟದಿಂದ ನಡೆಸಲಾಗಿದ್ದು ಈ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಅಂಬೇಡ್ಕರ್ ಸೇನೆಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಬಸು ಈ. ಕಟ್ಟಿಮನಿ (ಮಾದರ) ಆಗ್ರಹಿಸಿದ್ದಾರೆ.
ಈ ಕುರಿತು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಅವರು, ಸಾರ್ವಜನಿಕರ ತೆರಿಗೆ ಹಣದಿಂದ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ಆದರೆ ಲಕ್ಷಾಂತರ ರೂಪಾಯಿ ವೆಚ್ಚದ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಕೆಲಸ ನಡೆದಿರುವ ಸ್ಪಷ್ಟವಾಗಿದೆ ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತು ನಿರ್ಮಿಸಿದ ಕಮಾನ ಗೆಟ್ ಒಂದೆಡೆ ಕಂಬಕ್ಕೆ ಬೆಂಕಿ ಹತ್ತಿ ಕರಕಲಾದ ಬಳಿಕವೇ ತರಾತುರಿಯಲ್ಲಿ ಗುತ್ತಿಗೆದಾರರಿಗೆ ಅಧಿಕಾರಿಗಳು ಬಿಲ್ ಪಾವತಿಸಿದ್ದಾರೆಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಕಾಮಗಾರಿಗೆ ಸಂಬಂಧಿಸಿದ ಸಾಮಾನ್ಯ ವರದಿಯಲ್ಲಿ ೧೮ ಲಕ್ಷ ಅಂದಾಜು ಮೊತ್ತ ನಿಗದಿಪಡಿಸಲಾಗಿದ್ದು, ಇದರಲ್ಲಿ ಶೇ.೧೮ರಷ್ಟು ಜಿಎಸ್‌ಟಿ ಸೇರಿಸಿರುವುದಾಗಿ ನಮೂದಿಸಲಾಗಿದೆ. ಕಾಮಗಾರಿಯಲ್ಲಿ ಬಳಸಿರುವ ಸಿಮೆಂಟ್, ಕಬ್ಬಿಣ, ಕಾಂಕ್ರೀಟ್, ಗ್ರಾನೈಟ್, ಸ್ಟೀಲ್ ಸೇರಿದಂತೆ ನಿರ್ಮಾಣ ಸಾಮಗ್ರಿಗಳ ಕಳಪೆ ಗುಣಮಟ್ಟದಿಂದ ಕೂಡಿರುವದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ ಕೇವಲ ಬೆಂಕಿಯ ಝಳಕ್ಕೆ ಸುಟ್ಟು ಹೋಗುವಂತಹ ಪ್ಲಾಸ್ಟಿಕ್ ಕೋಟ್ ಹಾಕಿರುವದು ಗುತ್ತಿಗೆದಾರ ಕಾಮಗಾರಿ ನಿರ್ವಹಣೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಇಂತಹ ಕಳಪೆ ಕೆಲಸಕ್ಕೆ ಅಧಿಕಾರಿಗಳು ಪುಷ್ಟಿ ನೀಡಿದಂತೆ ಗೇಟ್ ಕಂಬ ಸುಟ್ಟು ಕರಕಲಾದ ನಂತರ ಬಿಲ್ಲ್ ಸಂದಾಯ ಮಾಡಿರುವದು ಅಧಿಕಾರಿಗಳ ನಡೆಯ ಮೇಲೆಯೂ ಸಂಶಯ ಮೂಡಿದೆ ಎಂದು ಆರೋಪಿಸಿರುವ ಅವರು ಸದರಿ ಕಾಮಗಾರಿಯ ಗುಣಮಟ್ಟವನ್ನು ಸ್ವತಂತ್ರ ತಾಂತ್ರಿಕ ತಂಡದಿಂದ ಪರೀಕ್ಷಿಸಬೇಕು. ಅಂದಾಜು ಪಟ್ಟಿಯಲ್ಲಿನ ಕಾಮಗಾರಿಯ ಪ್ರಮಾಣ ಹಾಗೂ ಸ್ಥಳದಲ್ಲಿ ನಿರ್ವಹಿಸಿರುವ ಕಾಮಗಾರಿಯ ಪ್ರಮಾಣವನ್ನು ಹೋಲಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಕಾಮಗಾರಿಯ ಮಾಪನ ಪುಸ್ತಕ (ಎಂ.ಬಿ.), ಗುಣಮಟ್ಟ ಪರೀಕ್ಷಾ ವರದಿ, ಅಂತಿಮ ಬಿಲ್ ಹಾಗೂ ಪಾವತಿ ದಾಖಲೆಗಳನ್ನು ಪರಿಶೀಲಿಸಿ, ಕಾಮಗಾರಿಯ ಗುಣಮಟ್ಟ ಪರಿಶೀಲಿಸದೆ ಬಿಲ್ ಪಾವತಿಗೆ ಅನುಮೋದನೆ ನೀಡಿದ ಅಧಿಕಾರಿಗಳ ಜವಾಬ್ದಾರಿ ನಿಗದಿಪಡಿಸಬೇಕು. ಕಳಪೆ ಕಾಮಗಾರಿ ಅಥವಾ ಹಣಕಾಸಿನ ಅಕ್ರಮ ಸಾಬೀತಾದಲ್ಲಿ ಗುತ್ತಿಗೆದಾರರಿಂದ ಹಣ ವಸೂಲಿ ಮಾಡುವುದರ ಜತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ, ಸ್ವತಂತ್ರ ತಾಂತ್ರಿಕ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಹಾಗೂ ಅಗತ್ಯವಿದ್ದಲ್ಲಿ ಪ್ರಯೋಗಾಲಯ ಪರೀಕ್ಷೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಕಾಮಗಾರಿಗೆ ಸಂಬಂಧಿಸಿದ ಮೂಲ ದಾಖಲೆಗಳು, ಬಿಲ್‌ಗಳು, ಮಾಪನ ಪುಸ್ತಕಗಳು, ಛಾಯಾಚಿತ್ರಗಳು ಮತ್ತು ಪಾವತಿ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸಬೇಕು. ತನಿಖೆಯ ವರದಿ ಹಾಗೂ ಕೈಗೊಂಡ ಕ್ರಮಗಳ ವಿವರವನ್ನು ಪ್ರಕಟಿಸಬೇಕೆಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ಅಭಿವೃದ್ಧಿಗಾಗಿ ಮೀಸಲಿಟ್ಟ ಸರ್ಕಾರಿ ಅನುದಾನ ಕಳಪೆ ಕಾಮಗಾರಿಗಳಿಂದ ವ್ಯರ್ಥವಾಗಬಾರದು. ದೂರಿನ ಬಗ್ಗೆ ಸೂಕ್ತ ತನಿಖೆ ನಡೆಸದಿದ್ದಲ್ಲಿ ಮೇಲಧಿಕಾರಿಗಳು ಹಾಗೂ ಸಕ್ಷಮ ತನಿಖಾ ಸಂಸ್ಥೆಗಳ ಗಮನಕ್ಕೆ ತಂದು ಕಾನೂನುಬದ್ಧ ಮುಂದಿನ ಕ್ರಮಕ್ಕೆ ಸಂಘಟನೆಯ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಸಲ್ಲಿಸಿದ ದೂರಿನಲ್ಲಿ ಅಂಬೇಡ್ಕರ್ ಸೇನೆಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಬಸು ಈ. ಕಟ್ಟಿಮನಿ (ಮಾದರ) ಅವರು ಎಚ್ಚರಿಸಿದ್ದಾರೆ.