ಬಳ್ಳಾರಿ, ಜು. 02: ಸರ್ಕಾರದ ವಿವಿಧ ಸೌಲಭ್ಯಗಳು, ಅದರಲ್ಲೂ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಪ್ರತಿಯೊಬ್ಬ ಅರ್ಹ ಮತದಾರರೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಕರೆ ನೀಡಿದರು.
ನಗರದ ಕೋಟೆ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ತಮ್ಮ ಹಾಗೂ ಕುಟುಂಬದ ಸದಸ್ಯರ ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಿ ಬಿ ಎಲ್ ಓ ಗೆ ಸಲ್ಲಿಸಿದ ಬಳಿಕ ಮಾತನಾಡಿ,
ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ಚುನಾವಣಾ ಆಯೋಗ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನ ಕೈಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರೂ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಸೇರಿದಂತೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈ ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಆಧಾರ್ ಜೋಡಣೆ, ಭಾವಚಿತ್ರದ ಸ್ಪಷ್ಟತೆ ಹಾಗೂ ಎಸ್‌ಐಆರ್ ಮಾರ್ಗಸೂಚಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಜಾಗೃತಿ ಮೂಡಿಸಿದರು.
ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರವನ್ನು ಅರ್ಜಿಗೆ ಅಂಟಿಸುವಾಗ ಬಣ್ಣದ ಭಾವಚಿತ್ರವನ್ನು ನೀಡಬೇಕು
ಭಾವಚಿತ್ರದಲ್ಲಿನ ಉಡುಪಿನ ಬಣ್ಣ ಮತ್ತು ಹಿನ್ನಲೆಯ ಬಣ್ಣ ಒಂದೇ ರೀತಿಯಾಗಿರಬಾರದು. ಇದರಿಂದ ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಸ್ಪಷ್ಟವಾಗಿ ಮುದ್ರಣವಾಗಲು ಅಸ್ಪಷ್ಟತೆ ಉಂಟಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಾಜೇಶ್ ಮಾತನಾಡಿ ಯಾವೊಬ್ಬ ಅರ್ಹ ಮತದಾರರು ಮತದಾರ ಪಟ್ಟಿಯಿಂದ ಹೊರಗೂಳಿಯಬಾರದು ಹಾಗೆಯೇ ಅನರ್ಹರು ಮತದಾರ ಪಟ್ಟಿಯಲ್ಲಿ ಇರಬಾರದು ಎಂಬ ಸದುದ್ದೇಶದಿಂದ ಚುನಾವಣಾ ಆಯೋಗ 24 ವರ್ಷಗಳ ನಂತರ ಈಗ ವಿಶೇಷ ಮತದಾರರ ಪರಿಷ್ಕರಣೆಯನ್ನು ಹಮ್ಮಿಕೊಂಡಿದೆ ಎಲ್ಲರೂ ಇದರಲ್ಲಿ ಭಾಗವಹಿಸಿ ಏನು ಫಾರಂ ಭರ್ತಿ ಮಾಡಿ ಬಿ ಎಲ್ ಓ ಗಳಿಗೆ ಸಹಕರಿಸಬೇಕು ಏನಾದರೂ ಅನಾನುಕೂಲವಿದ್ದಲ್ಲಿ ಸ್ಥಳದಲ್ಲಿಯೇ ನಮ್ಮ ಅಧಿಕಾರಿಗಳು ನಿಮ್ಮ ಸಹಾಯಕ್ಕೆ ಇರಲಿದ್ದಾರೆ, ಇದರಿಂದ ಮತದಾರರು ಯಾವುದೇ ತಪ್ಪು ಕಲ್ಪನೆಯನ್ನು ಇಟ್ಟುಕೊಳ್ಳಬಾರದು ಮತ್ತು ಯಾವುದೇ ಕಾರಣಕ್ಕೂ ಎಸ್ ಐ ಆರ್ ನಿಂದ ದೂರ ಇರಬೇಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಹೆಚ್.ಡಿ. ರಾಜೇಶ್, ತಹಸೀಲ್ದಾರ್ ರೇಖಾ, ಎಸ್‌ಐಆರ್ ಮೇಲುಸ್ತುವಾರಿ ಮಂಜುನಾಥ ತಳವಾರ ಹಾಗೂ ಬಿಎಲ್‌ಒ ಸುಪ್ರೀತ, ಗೋವರ್ಧನ್, ನಟರಾಜ್ ಗೌಡ, ನಾಗರಾಜ್, ಅರುಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.