ಬಾಗಲಕೋಟೆ : ಮೇ ೦೮: ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಆಡಳಿತಕ್ಕೆ ಹೊಸ ರೂಪ ನೀಡುವ ಮೂಲಕ ಜನಪರ ಹಾಗೂ ಪಾದರ್ಶಕ ಆಡಳಿತಕ್ಕೆ ಆದ್ಯತೆ ನೀಡಲಾಗುವುದೆಂದು ಬಿಟಿಡಿಎ ನೂತನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ಬಿಟಿಡಿಎ ಕಚೇರಿಯಲ್ಲಿ ಶುಕ್ರವಾರ ಬಿಟಿಡಿಎ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಸಂಸ್ಥೆಯ ಅಭಿವೃದ್ದಿ, ಸಾರ್ವಜನಿಕರ, ಸಂತ್ರಸ್ತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ, ಮೂಲಭೂತ ಸೌಲಭ್ಯಗಳ ವೃದ್ದಿ ಹಾಗೂ ಸಮಗ್ರ ಅಭಿವೃಧ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದೆಂದು ತಿಳಿಸಿದರು.
ಮುಳುಗಡೆ ಸಂತ್ರಸ್ಥರಿಗೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣದ ಕೆಲಸ ಸಮರ್ಪಕವಾಗಿ ಆಗಬೇಕಿದೆ. ಸಾರ್ವಜನಿಕರು, ಸಂತ್ರಸ್ತರು ಪದೇ ಪದೇ ಕಚೇರಿಗೆ ಬರುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಾಗೃತಿಯಿಂದ, ಸುರಕ್ಷತೆಯಿಂದ ಸಾರ್ವಜನಿಕರ ತೊಂದರೆ ಹಾಗೂ ಬೇಡಿಕೆಗಳಿಗೆ ಸ್ಪಂದಿಸಿ, ಪಾರದರ್ಶಕವಾಗಿ ಕೆಲಸ ಕಾರ್ಯಗಳು ಆಗುವ ರೀತಿಯಲ್ಲಿ ಆಡಳಿತದಲ್ಲಿ ಸುಧಾರಣೆ ತರುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಸರಕಾರದ ಆಶಯಗಳಿಗೆ ಅನುಗುಣವಾಗಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಅಭಿವೃದ್ದಿಯ ಕಾಮಗಾರಿಗಳಲ್ಲಿ ಹೊಸ ಚೈತನ್ಯ ಮೂಡಿಸಲಾಗುವುದು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಸಾರ್ವಜನಿಕರ, ಸಂತ್ರಸ್ತರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವುದರ ಜೊತೆಗೆ ಪದೇ ಪದೇ ಅಲೆದಾಡುವದನ್ನು ತಪ್ಪಿಸುವ ಕೆಲಸ ಮಾಡಲಾವುದೆಂದು ತಿಳಿಸಿದ ಅವರು ಜನರಿಗೆ ಗುಣಮಟ್ಟದ ಸೇವೆ ಒದಗಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದರು.
ಬಿಟಿಡಿಎ ಆಡಳಿತವನ್ನು ಇನ್ನಷ್ಟು ಜನಸ್ನೇಹಿ, ಪಾರದರ್ಶಕ ಹಾಗೂ ಅಭಿವೃದ್ದಿ ಮುಖಿಯಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಸಂತ್ರಸ್ತರಿಗೆ ನಿವೇಶನಗಳ ಹಂಚಿಕೆ, ತಾಂತ್ರಿಕ ದೋಷಗಳು ಸೇರಿದಂತೆ ಒಟ್ಟಾರೆಯಾಗಿ ಸಂತ್ರಸ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲ ರೀತಿಯ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತದೆ. ಯಾವ ಮಧ್ಯವರ್ತಿಗಳ ಹಸ್ತಕ್ಷೇಪ ಆಗದಂತೆ ನೋಡಿಕೊಳ್ಳಲಾಗುವುದು. ಈ ಕಾರ್ಯಕ್ಕೆ ಸಾರ್ವಜನಿಕರ, ಅಧಿಕಾರಿಗಳ ಸಹಕಾರ ಅಗತ್ಯವಾಗಿ ಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಶಾಸಕ ಉಮೇಶ ಮೇಟಿ, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಮುಖ್ಯ ಇಂಜಿನೀಯರ್ ಚಂದ್ರಹಾಸ ಬಂಡಿ, ಕಾರ್ಯನಿರ್ವಾಹಕ ಅಭಿಯಂತರ ವಾಯ್.ಬಿ.ಪಾತ್ರೋಟ, ಪುನರ್ವಸತಿ ಅಧಿಕಾರಿ ಪ್ರಶಾಂತ ಬಾರಿಗಿಡದ ಸೇರಿದಂತೆ ಇತರರು ಉಪಸ್ಥಿತರಿದ್ದರು.