ಕೊಪ್ಪಳ ಮೇ 08 : ತಾಲ್ಲೂಕಿನ ಇರಕಲ್ಲಗಡಾ ಗ್ರಾಮ ಪಂಚಾಯತಿಯ ವತಿಯಿಂದ ಕೊಡದಾಳ ಗ್ರಾಮದ ವಿಜಯ ಮಹಾಂತಶ್ರೀ ವೇದಿಕೆಯಲ್ಲಿ ಗುರುವಾರದಂದು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಐಇಸಿ ಕಾರ್ಯಕ್ರಮದಡಿ ರೋಜಗಾರ್ ದಿವಸ್ ಆಚರಣೆ ಮಾಡಲಾಯಿತು.
ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಅವರು ಮಾತನಾಡಿ, ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಎಲ್ಲಾ ಕೂಲಿಕಾರರು ಫಾರಂ ನಂ.6 ಸಲ್ಲಿಸುವ ಮೂಲಕ ಕೂಲಿ ಕೆಲಸಕ್ಕೆ ಹಾಜರಾಗಬೇಕು. ಪ್ರತಿ ಮಾನವ ದಿನಕ್ಕೆ 370/- ಕೂಲಿ ನಿಗದಿಪಡಿಸಿದ್ದು ಸಂಪೂರ್ಣವಾಗಿ ಕೂಲಿ ಕೆಲಸ ನಿರ್ವಹಿಸಿ ಪೂರ್ತಿ ಹಣ ಪಡೆಯುವಂತೆ ಕರೆ ನೀಡಿದರು.
ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕೆಲಸ ಜೊತೆಗೆ ಆರೋಗ್ಯ ಕಡೆ ಕಾಳಜಿವಹಿಸಬೇಕು. 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಜಾಬಕಾರ್ಡ ಬಳಕೆ ಮಾಡಿಕೊಂಡು ಕೂಲಿ ಕೆಲಸ ಪಡೆಯಲು ಕಡ್ಡಾಯವಾಗಿ ನಮೂನೆ-6 ಸಲ್ಲಿಸಬೇಕು. ಮೇ ಮತ್ತು ಜೂನ್ ವರೆಗೆ 60 ದಿನಗಳ ಕೂಲಿ ಕೆಲಸ ಪಡೆಯಬೇಕು. ಕೂಲಿ ಹಣದಿಂದ ಮಕ್ಕಳ ಶಾಲಾ, ಕಾಲೇಜು ಶುಲ್ಕ ಭರಿಸಲು, ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗೆ ಶುಲ್ಕ ಹಾಗೂ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ. ಜಾಬಕಾರ್ಡನಲ್ಲಿರುವ ಕುಟುಂಬದ ಎಲ್ಲ ಸದಸ್ಯರು ಇ-ಕೆವೈಸಿ ಹೊಂದಿದ ನಂತರವೇ ಎನ್‌ಎಂಆರ್ ಪ್ರಕಾರ ಕೂಲಿಕಾರರು ಕೂಲಿ ಕೆಲಸಕ್ಕೆ ಹಾಜರಾಗಬೇಕು. 1 & 2ನೇ ಹಾಜರಾತಿ ಕಡ್ಡಾಯವಾಗಿರುತ್ತದೆ ಎಂದರು.
ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಪ್ರತಿ ಜಾಬಕಾರ್ಡಗೆ 100 ಮಾನವ ದಿನಗಳ ಕೂಲಿ ಕೆಲಸ ನೀಡಲಾಗುತ್ತಿದ್ದು ಸದುಪಯೋಗ ಪಡೆಯಬೇಕು. ಗ್ರಾಮೀಣ ಭಾಗದ ಕೂಲಿಕಾರರು ಕೂಲಿ ಅರಸಿ ಗುಳೆ ಹೋಗುವದನ್ನು ನಿಯಂತ್ರಿಸಿ ಸ್ಥಳೀಯವಾಗಿ ಉದ್ಯೋಗ ಒದಗಿಸಿ ಅವರಿಗೆ ಕೂಲಿ ಹಣ ಪಾವತಿಸಿ ಸ್ವಾವಂಬಿ ಜೀವನ ನಡೆಸಲು ಯೋಜನೆಯ ಸದುದ್ದೇಶವಾಗಿದೆ. ಎಲ್ಲಾ ಕೂಲಿಕಾರರು ಸಾಮಾಜಿಕ ಭದ್ರತೆ ವಿಮೆಗಳಾದ ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ.ಗಳಲ್ಲಿ ನೊಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಯಕ ಬಂಧುಗಳ ಮೂಲಕ ಒಟ್ಟು 121 ಕೂಲಿಕಾರರ ಫಾರಂ ನಂ.6 ಸ್ವೀಕರಿಸಲಾಯಿತು.
ಗ್ರಾಮ ಪಂಚಾಯತಿ ಡಿಇಒ ಶರಣಪ್ಪ, ಸಿಬ್ಬಂದಿ ಸಿದ್ರಾಮಯ್ಯಸ್ವಾಮಿ, ಗ್ರಾಮ ಕಾಯಕ ಮಿತ್ರ ಶ್ರೀದೇವಿ, ಕಾಯಕ ಬಂಧುಗಳಾದ ಹನಮಂತಪ್ಪ, ಮರಿಯಪ್ಪ, ಕಿರಣ್ ಕೂಲಿಕಾರರು ಉಪಸ್ಥಿತರಿದ್ದರು.
****