ಸಂಕೇಶ್ವರ : ಕವಿಗೆ ಸೌಂದರ್ಯ ಪ್ರಜ್ಞೆ ಮತ್ತು ಸಂವೇದನಾಶೀಲತೆ ಇದ್ದಾಗ ಮಾತ್ರ ಬದುಕಿನ ಅಂತರಾಳವನ್ನು ಅರಿತು ಲೋಕದ ಮುಂದೆ ಪ್ರಚುರಪಡಿಸಲು ಹಾಗೂ ಜನ ಅದನ್ನು ಆಸ್ವಾದಿಸಿ ಅನುಭವಿಸಲು ಸಾಧ್ಯವೆಂದು ಆಂಗ್ಲ ಉಪನ್ಯಾಸಕ ಪ್ರೊ. ಎ. ಬಿ. ನಾಯಕ ಅಭಿಪ್ರಾಯಪಟ್ಟರು.
ಸಮೀಪದ ಸೋಲಾಪುರ ಗ್ರಾಮದಲ್ಲಿ ವಿಶ್ವಕನ್ನಡಿಗ ಪ್ರಕಾಶನದ ವತಿಯಿಂದ ಹಮ್ಮಿಕೊಂಡ ಯುವಕವಿ, ಸಂಘಟಕ, ಪತ್ರಕರ್ತ, ಪ್ರಾಧ್ಯಾಪಕ ಡಾ. ಕುಮಾರ ಎಂ. ತಳವಾರ ಅವರ ಚೊಚ್ಚಲ ಕವನ ಸಂಕಲನ 'ನನ್ನದೇ ತಪ್ಪು' ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮುನುಷ್ಯನ ಅದಮ್ಯ ಭಾವಗಳು ಏಕಾಂತದಲ್ಲಿದ್ದಾಗ ಮುಚ್ಚಿಡಲಾಗದೇ ಅಕ್ಷರದ ಆಸರೆಯೊಂದಿಗೆ ವ್ಯಕ್ತಪಡಿಸುವ ಭಾವಗಳೇ ಕವಿತೆಗಳಾಗುತ್ತವೆ ಎಂದರಲ್ಲದೇ ಈ ಭಾಗದಲ್ಲಿ ಡಾ. ಕುಮಾರ ತಳವಾರ ಅವರು ಭರವಸೆಯ ಕವಿಯಾಗಿದ್ದು, ಅವರಿನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಹುಕ್ಕೇರಿ ತಾಲೂಕಾ ಕಸಾಪ ಅಧ್ಯಕ್ಷ ಪ್ರೊ. ಪ್ರಕಾಶ ಅವಲಕ್ಕಿ ಕವನ ಸಂಕಲನ ಜನಾರ್ಪಣೆ ಮಾಡಿ ಮಾತನಾಡುತ್ತ, ಮೊಬೈಲ್ ಹಾವಳಿಯಿಂದಾಗಿ ಓದುವ ಮತ್ತು ಬರೆಯುವ ಎರಡೂ ಕ್ರಿಯೆಗಳು ಕಡಿಮೆಯಾಗಿದ್ದು, ಇಂತಹ ವಿಷಮ ಸಂದರ್ಭದಲ್ಲಿ ಲೇಖನಿಯನ್ನು ಕೈಗೆತ್ತಿಕೊಂಡಿರುವ ವಿಶ್ವಕನ್ನಡಿಗನಂತಹ ಯುವ ಬರಹಗಾರರು ಭರವಸೆ ಮೂಡಿಸುತ್ತಾರೆ ಎಂದರು.
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಮಹಾದೇವ ಕ್ಷೀರಸಾಗರ ಕನ್ನಡ ಧ್ವಜಾರೋಹಣ ನೆರವೇರಿಸಿದರು. ರೈತ ಸಂಘದ ಅಧ್ಯಕ್ಷ ಭೀಮರಾವ ಶಿಂತ್ರೆ ಹಾಗೂ ಗ್ರಾ.ಪಂ. ಸದಸ್ಯ ಸಿಕಂದರ್ ರಣಮಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಇದೇ ವೇಳೆ ಇತ್ತೀಚೆಗೆ ಭಾರತೀಯ ಸೈನ್ಯ(ಅಗ್ನಿವೀರ)ಕ್ಕೆ ಆಯ್ಕೆಯಾದ ಓಂಕಾರ ಮಾಳಿಯವರ ತಂದೆ-ತಾಯಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸ್ನೇಹಾ ಮಾರುತಿ ಧನಗರ ಅವರನ್ನು ಸನ್ಮಾನಿಸಲಾಯಿತು.
ಕವಿ ಕುಮಾರ ಮಾತನಾಡಿ, ಈ ಸಂಕಲನದಲ್ಲಿರುವ ಅಷ್ಟೂ ಕವನಗಳನ್ನು ನಾನು ಬರೆದೆ ಎನ್ನುವುದಕ್ಕಿಂತ ಜೀವನದಲ್ಲಿ ಕಂಡುಂಡ ನೋವು, ಸಂಕಟ, ಪ್ರೀತಿ, ವಿರಹ, ನಾಡಾಭಿಮಾನಗಳನ್ನು ಅಕ್ಷರ ರೂಪದಲ್ಲಿ ಹೊರಹಾಕಿದ್ದಷ್ಟೇ ಎನ್ನುತ್ತಾ ಹಳೆಯ ನೆನಪುಗಳೊಂದಿಗೆ ಕೆಲಕ್ಷಣ ಭಾವುಕರಾದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯ ಶಬ್ಬಿರ ಮದಾರಖಾನ, ಸಂಜಯ ಕಾಂಬಳೆ, ನಾಗೇಶ ವಾಗರಾಳೆ, ಗುಡೇಸಾಬ್ ನದಾಫ್, ಬಸವರಾಜ ಕೋರಿ, ಪ್ರಭಾಕರ ಸುತಾರ, ಸುಶೀಲಾ ಅಳಗುಂಡಿ, ಶೈಲಾ ಅಳಗುಂಡಿ, ಶೋಭಾ ಕೋಣೆ, ಅಜಿತ್ ಕೋಣೆ, ಭಾರತಿ ಧನಗರ, ಶೋಭಾ ಮಾಳಿ, ಹಸನ್ ಸುತಾರ, ಶಶಿಕಾಂತ ಕೋಣೆ ಸೇರಿದಂತೆ ಗ್ರಾಮಸ್ಥರು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ಪ್ರೊ. ಶ್ರೀಕಾಂತ ಘಸ್ತಿ ಸ್ವಾಗತಿಸಿದರು. ಕವಿ ಕಾಡೇಶ ಬಸ್ತವಾಡೆ ಪರಿಚಯಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಎಸ್. ಎಸ್. ಖವಣಿ ನಿರೂಪಿಸಿದರು. ಶಿವರಾಜ ಕುಡಬಾಳೆ ವಂದಿಸಿದರು.
