ಬೇರೆ ದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ಎಷ್ಟು ತೆರಿಗೆ ಹಾಕುತ್ತವೋ, ತಾವೂ ಕೂಡ ಆ ದೇಶಗಳ ಉತ್ಪನ್ನಗಳ ಮೇಲೆ ಅಷ್ಟೇ ತೆರಿಗೆ ಹಾಕುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಾ ಬಂದಿದ್ದಾರೆ. ನಾಳೆ ಅಥವಾ ನಾಳಿದ್ದು (ಫೆ. 12) ಅಮೆರಿಕ ಅಧ್ಯಕ್ಷರು ಪ್ರತ್ಯೇಕ ಸುದ್ದಿಗೋಷ್ಠಿ ಕರೆದು ಆಮದು ಸುಂಕಗಳ ಕುರಿತು ಮಾತನಾಡಲಿದ್ದಾರೆ. 2017ರಲ್ಲಿ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾದಾಗಲೂ ಡೊನಾಲ್ಡ್ ಟ್ರಂಪ್ ಅವರು ಆಮದು ಸುಂಕ ವಿಧಿಸುವ ನೀತಿ ಅನುಸರಿಸಿದ್ದರು.
ಅಮೆರಿಕಕ್ಕೆ ಹಲವು ದೇಶಗಳು ಉಕ್ಕು ಮತ್ತು ಅಲೂಮಿನಿಯಮ್ ಉತ್ಪನ್ನಗಳನ್ನು ಸರಬರಾಜು ಮಾಡುತ್ತವೆ. ಕೆನಡಾ, ಬ್ರೆಜಿಲ್, ಮೆಕ್ಸಿಕೋ, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂ ದೇಶಗಳಿಂದ ಅತಿಹೆಚ್ಚು ಸ್ಟೀಲ್ ಮತ್ತು ಅಲೂಮಿನಿಯಂ ಉತ್ಪನ್ನಗಳು ಅಮೆರಿಕಕ್ಕೆ ರಫ್ತಾಗುತ್ತವೆ. ಈ ಪೈಕಿ ಶೇ. 75ಕ್ಕೂ ಹೆಚ್ಚು ಪಾಲು ಕೆನಡಾದ್ದಾಗಿದೆ. ಈಗ ಟ್ರಂಪ್ ಅವರು ಆಮದು ಸುಂಕ ವಿಧಿಸುವುದರಿಂದ ಕೆನಡಾಗೆ ಅತಿಹೆಚ್ಚು ಪರಿಣಾಮವಾಗುತ್ತದೆ. ಬ್ರೆಜಿಲ್, ಮೆಕ್ಸಿಕೋಗೂ ಪರಿಣಾಮ ಉಂಟಾಗುತ್ತದೆ.
ಭಾರತೀಯ ಕಂಪನಿಗಳಿಂದ ಅಮೆರಿಕಕ್ಕೆ ಉಕ್ಕು ಮತ್ತು ಅಲೂಮಿನಿಯಂ ಉತ್ಪನ್ನಗಳ ರಫ್ತಾಗುವುದು ಕಡಿಮೆ. ಇಟಲಿ, ನೇಪಾಳ ಮತ್ತು ಬೆಲ್ಜಿಯಂ ದೇಶಗಳು ಭಾರತೀಯ ಉಕ್ಕು ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ಎನಿಸಿವೆ. ಟಾಟಾ ಸ್ಟೀಲ್, ಜೆಎಸ್ಡಬ್ಲ್ಯೂ ಸ್ಟೀಲ್, ಸ್ಟೀಲ್ ಅಥಾರಿಟಿ (ಎಸ್ಎಐಎಲ್), ಇವು ಭಾರತದ ಪ್ರಮುಖ ಉಕ್ಕು ಉತ್ಪಾದಕ ಸಂಸ್ಥೆಗಳಾಗಿವೆ.