ಬಳ್ಳಾರಿ,ಜೂ.23: ಸ್ಟೇಟ್ ಬ್ಯಾಂಕ್ ಆಫ್ ಯೂನಿಯನ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿವಂಗತ ಸತೀಶ್ ವಿ. ವಾಘ ಅವರ ೭ನೇ ವರ್ಷದ ಸ್ಮರಣಾರ್ಥ ಬಳ್ಳಾರಿಯ ಎಸ್‌ಬಿಐ ಬ್ಯಾಂಕ್ ಆವರಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ. ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ, ಬಳ್ಳಾರಿ ಸಹ ಕಾರ್ಯದರ್ಶಿ ಸೂರಜ್ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಬ್ಯಾಂಕ್ ಸಿಬ್ಬಂದಿ, ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ೫೦ಕ್ಕೂ ಹೆಚ್ಚು ಯುನಿಟ್‌ಗಳಷ್ಟು ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ರಕ್ತದಾನವು ಮಾನವೀಯತೆಯ ಪ್ರತೀಕವಾಗಿದ್ದು, ಒಂದು ಯುನಿಟ್ ರಕ್ತವು ಹಲವು ಜೀವಗಳನ್ನು ಉಳಿಸುವ ಶಕ್ತಿ ಹೊಂದಿದೆ. ದಿವಂಗತ ಸತೀಶ್ ವಿ. ವಾಘ ಅವರ ಸೇವಾ ಮನೋಭಾವವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಯೂನಿಯನ್ ಉಪಾಧ್ಯಕ್ಷೆ ಸರ್ವಮಂಗಳ ಎಚ್.ಆರ್., ಜನರಲ್ ಸೆಕ್ರೆಟರಿ ಧರ್ಮೇಂದ್ರ ಜಿ.ಎನ್., ಶಿವಕುಮಾರ್ ಎಂ., ಬಿ. ರಾಮುಡು, ವಿಜಯಲಕ್ಷ್ಮಿ ಕೆ. ಹಾಗೂ ಬಳ್ಳಾರಿಯ ರಕ್ತದಾನ ಕಾರ್ಯಕರ್ತ ಬ್ಲಡ್ ದೇವಣ್ಣ ಇದ್ದರು.