ಜಮಖಂಡಿ: ನಗರದಲ್ಲಿ ನಡೆಯುವ ಸಭೆ ಮತ್ತು ಸಮಾರಂಭಗಳಿಗೆ ಪರಿಸರಸ್ನೇಹಿಯಾಗಿ ಸೈಕಲ್ನಲ್ಲೇ ಸಂಚರಿಸುವುದಾಗಿ ಘೋಷಿಸಿದ್ದ ಶಾಸಕ ನಾಡೋಜ ಜಗದೀಶ ಗುಡಗುಂಟಿ ನುಡಿದಂತೆ ನಡೆಯುತ್ತಿದ್ದಾರೆ, ತಮ್ಮ ದಂತ ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಸೈಕಲ್ನಲ್ಲೇ ತೆರಳಿ ಎಲ್ಲರ ಗಮನ ಸೆಳೆದಿದ್ದಾರೆ. ನಗರದ ತಮ್ಮ ನಿವಾಸದಿಂದ ದಂತ ಚಿಕಿತ್ಸೆಗಾಗಿ ಸ್ಥಳೀಯ ವೈದ್ಯರ ಕ್ಲಿನಿಕ್ಗೆ ಹೊರಟ ಶಾಸಕರು, ವಾಹನವನ್ನು ಬಳಸುವ ಬದಲು ತಮ್ಮ ಸೈಕಲ್ ಹತ್ತಿ ಹೊರಟರು. ಅವರೊಂದಿಗೆ ಅವರ ವಾಹನ ಚಾಲಕ ಆಪ್ತ ಸಹಾಯಕರು ಸಹ ಸೈಕಲ್ನಲ್ಲೇ ತೆರಳಿ ಶಾಸಕರ ಈ ಸರಳತೆಗೆ ಸಾಕ್ಷಿಯಾದರು. ಪರಿಸರ ಕಾಳಜಿ ಹಾಗೂ ಇಂಧನ ಉಳಿತಾಯದ ಸಂದೇಶ ಸಾರುತ್ತಿರುವ ಶಾಸಕ ನಾಡೋಜ ಜಗದೀಶ ಗುಡಗುಂಟಿ ಅವರು, ತಮ್ಮ ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಸೈಕಲ್ನಲ್ಲೇ ವೈದ್ಯರ ಬಳಿಗೆ ತೆರಳುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ನಗರದಲ್ಲಿ ನಡೆಯುವ ಕಾರ್ಯಕ್ರಮ, ಸಭೆ ಹಾಗೂ ವಿವಿಧ ಸಮಾರಂಭಗಳಿಗೆ ಸೈಕಲ್ನಲ್ಲೇ ಸಂಚರಿಸುವದಾಗಿ ಹೇಳಿದ್ದ ಶಾಸಕರು, ಅದನ್ನು ಕೇವಲ ಮಾತಿಗೆ ಸೀಮಿತಗೊಳಿಸದೆ ತಮ್ಮ ವೈಯಕ್ತಿಕ ಕೆಲಸಗಳಿಗೂ ಅಳವಡಿಸಿಕೊಂಡಿದ್ದಾರೆ.
ಗುಡಗುಂಟಿ ಅವರು ಸೈಕಲ್ನಲ್ಲೇ ವೈದ್ಯರ ಬಳಿಗೆ ತೆರಳಿದ್ದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತು. ಸರಳ ಜೀವನಶೈಲಿ, ಇಂಧನ ಉಳಿತಾಯ ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ತಮ್ಮ ನಡೆ ಮೂಲಕವೂ ಸಾರುತ್ತಿರುವ ಶಾಸಕರ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಂಧನ ಉಳಿವು–ಪರಿಸರ ರಕ್ಷಣೆಯ ಸಂದೇಶವನ್ನು ವೈಯಕ್ತಿಕ ಬದುಕಿನಲ್ಲೂ ಅಳವಡಿಸಿ ಕೊಂಡಿರುವುದು ಮಾದರಿ ನಡೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.