ಬಾಗಲಕೋಟೆ, ಮೇ ೦೨ : ಈ ಬಾರಿಯ ಎಸ್.ಎಸ್.ಎಲ್‌ಸಿ ಪರೀಕ್ಷೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಒಳಪಟ್ಟಿರುವ ವಸತಿ ಶಾಲೆಗಳ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಸಾಧನೆ ಮಾಡಿದ್ದಕ್ಕೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಅಭಿನಂದಿಸಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ ಮಾದರಿಯ ಶಾಲೆಗಳಾದ ಬಾದಾಮಿ (೧೦೦%) ಜಮಖಂಡಿ(೯೮%), ಇಳಕಲ್(೯೭.೭೭%), ಬನಹಟ್ಟಿ(೯೭.೦೫%) ಮುದೋಳ(೯೬.೧೫%), ತೇರದಾಳ(೯೬%), ಬೀಳಗಿ (೯೫.೬೫%), ಸೆಕ್ಟರ್ ನಂ ೧೩ ನವನಗರ (೯೫.೮೩%) ಸೆಕ್ಟರ್ ನಂ.೩೮ ನವನಗರ (೯೫.೧೨%) ಈ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಅಲ್ಲದೇ ಎಪಿಜೆ ಅಬ್ದುಲ ಕಲಾಂ ಸಿ.ಬಿ.ಎಸ್.ಸಿ ಹಾಗೂ ನವನಗರ, ಗುಡೂರ್ ಎಸ್.ಸಿ (ಹುನಗುಂದ), ಬೂದಿಹಾಳ ಎಸ್‌ಎ(ಬಿಳಗಿ), ಜಮಖಂಡಿ, ತೇರದಾಳ, ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ಜಿಲ್ಲೆಯ ಐದು ಮೇಟ್ರಿಕ್ ಪೂರ್ವ ಅಲ್ಪಸಂಖ್ಯಾತ ವಸತಿ ನಿಲಯದ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಸಾಧನೆ ಮಾಡಿದ್ದಾರೆ. ಈ ಬಾರಿ ಈ ಎಲ್ಲಾ ಶಾಲೆಗಳಿಗೆ ವಿಶೇಷ ಬೋಧನಾ ಕ್ರಮಕ್ಕೆ ಸೂಚಿಸಲಾಗಿತ್ತು. ಪ್ರತಿದಿನ ಒಂದು ಶಾಲೆಗೆ ಭೇಟಿ ನೀಡಿ ಅಲ್ಲಿಯ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕೆಂಬ ಉತ್ಸಾಹ ಮೂಡಿಸಿದ್ದರ ಫಲವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ನೀರಿಕ್ಷೆಗೆ ತಕ್ಕಂತೆ ಈ ಬಾರಿ ಸಾಧನೆ ಮಾಡಿದ್ದು, ಸಂತಸ ತಂದಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.