ಬಳ್ಳಾರಿ. ಆ. 31. : ವಚನ ಸಾಹಿತ್ಯವನ್ನು ಬೋಧನೆ ಮತ್ತು ಅಧ್ಯಯನಕ್ಕೆ ಮಾತ್ರ ಸೀಮಿತಗೊಳಿಸದೆ ಅದರಲ್ಲಿರುವ ವಿಚಾರಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗಲು ಸಾಧ್ಯವೆಂದು ಕಲ್ಯಾಣ ಸ್ವಾಮಿ ಮಠದ ಶ್ರೀ ಕಲ್ಯಾಣ ಸ್ವಾಮಿಗಳು ಹೇಳಿದರು.
ಅವರು ನಗರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಪೂಜ್ಯ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತಿ ಮತ್ತು ಲಿಂ.ಹಾವಿನಾಳು ಬಸಣ್ಣ ಮತ್ತು ರುದ್ರಮ್ಮ ದತ್ತಿ ಲಿಂ.ಎಲೆ ಮಲ್ಲೇಶಪ್ಪ ಯಡವಳ್ಳಿ ಪಂಚಾಕ್ಷರಪ್ಪ ದತ್ತಿ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿ,
ಸ್ವಾಸ್ಥ್ಯ ಸಮಾಜ ರೂಪಿಸಲು, ಮಾನವೀಯ ಮೌಲ್ಯವನ್ನು ಒಳಗೊಂಡಿರುವ ಬದುಕನ್ನು ಕಟ್ಟಿಕೊಳ್ಳಲು ಹಾಗೂ ಉತ್ತಮ ವ್ಯಕ್ತಿತ್ವ ಹೊಂದಲು ವಚನ ಸಾಹಿತ್ಯದ ಅಧ್ಯಯನದ ಜೊತೆಗೆ ಅದರಂತೆ ನಡೆಯುವದು ಕೂಡ ಇಂದು ತುಂಬಾ ಅಗತ್ಯವಿದೆ, ಲೌಕಿಕ ಬದುಕಿನಲ್ಲಿ ನೈತಿಕ ಮೌಲ್ಯಗಳು ಕಣ್ಮರೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
"ಶರಣ ಸಾಹಿತ್ಯದ ಪ್ರಸ್ತುತತೆ ಮತ್ತು ಯುವ ಜನತೆ" ವಿಷಯ ಕುರಿತು ಮಾತನಾಡಿದ ವೀರಶೈವ ಮಹಾ ವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಕೆ.ನೀಲಮ್ಮ,
ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯ ಅಮೂಲ್ಯ ಸಂಪತ್ತು . 12ನೇ ಶತಮಾನದ ಈ ವಿಶಿಷ್ಟ ಸಾಹಿತ್ಯ ಪ್ರಕಾರವನ್ನು ಬಸವಾದಿ ಶರಣರು ಜನಸಾಮಾನ್ಯರಿಗೆ ತಲುಪಿಸಿದರು. ವಚನಗಳು ಧಾರ್ಮಿಕ, ಸಾಮಾಜಿಕ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದ್ದು ಸಮಾನತೆ, ಶ್ರಮ,ಕಾಯಕ ಮತ್ತು ಭಕ್ತಿಗೆ ಮಹತ್ವ ನೀಡಿ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿ ಸಮಾನತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದರೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಹಾವಿನಾಳ್ ಶರಣಬಸಪ್ಪ,ಹಾವಿನಾಳ್ ಸೂಗಪ್ಪ ,ಬಿ.ಪಿ.ಯಡವಳ್ಳಿ ಮತ್ತು ಕೆ.ಎಂ.ಗುರುಪಾದಯ್ಯ ಉಪಸ್ಥಿತರಿದ್ದರು.
ವೀರಶೈವ ಮಹಾ ವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಜಿ.ಮಲ್ಲನಗೌಡ,ಗಡಿನಾಡ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಗಿರಿಜಾಪತಿ,ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಮಧುಮತಿ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಕನ್ನಡ ಅಧ್ಯಾಪಕ ಸಿ.ಕೊಟ್ರೇಶ್ ಸ್ವಾಗತಿಸಿದರು.ಪ್ರಭಾರಿ ಪ್ರಾಂಶುಪಾಲ ಮರಿಗಾದಿಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿನಿ ವಿಜಯಲಕ್ಷ್ಮಿ ನಿರೂಪಿಸಿ,ವಂದಿಸಿದರು.
ಗಾಯಕ ಡಿ.ಎಸ್.ಗಣೇಶ್ ಗೀತ ಗಾಯನ ನಡೆಸಿಕೊಟ್ಟರು.