ಬಳ್ಳಾರಿ,ಆ.31: ಕನ್ನಡ ಸಂಸ್ಕೃತಿ, ಇತಿಹಾಸ ಮತ್ತು ಗ್ರಾಮೀಣ ಮಟ್ಟದ ಕಲೆ-ಕಲಾವಿದರ ಪರಿಚಯವನ್ನು ಮುಂದಿನ ಪೀಳಿಗೆಯಾದ ಮಕ್ಕಳಿಗೆ ಮಾಡಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಿರುಗುಪ್ಪ ತಹಶೀಲ್ದಾರರಾದ ಗೌಸಿಯಾ ಬೇಗಂ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಿರುಗುಪ್ಪ ಪಟ್ಟಣದ ನೇತಾಜಿ ವ್ಯಾಯಾಮ ಶಾಲಾ ಆವರಣದ ನೇತಾಜಿ ಬಯಲು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ಸೌರಭ’ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿ ಅತ್ಯಂತ ಶ್ರೀಮಂತ ಹಾಗೂ ಪ್ರಾಚೀನವಾದದ್ದು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.
ನೃತ್ಯ ಕಲಾವಿದ ಜಿಲಾನಿ ಭಾಷಾ ಅವರು ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲೆಯ ಕಲಾವಿದರಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭಗಳಂತಹ ವೇದಿಕೆಗಳ ಮೂಲಕ ಯುವ ಪ್ರತಿಭೆಗಳು ಹಾಗೂ ಹಿರಿಯ ಕಲಾವಿದರಿಗೆ ತಮ್ಮ ಕಲೆ ಪ್ರದರ್ಶಿಸಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ಯುವಕರು ಕಲೆಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
*ಸಮಾರಂಭದಲ್ಲಿ ಗಮನಸೆಳೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು:*
ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ಖ್ಯಾತ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಜಾನಪದ ಕಲಾ ಪ್ರದರ್ಶನಗಳು ಜರುಗಿದವು.
ಬಳ್ಳಾರಿಯ ಕೆ. ಪುನೀತ್ ಅವರ ವೀಣಾವಾದನ ಹಾಗೂ ತೋರಣಗಲ್ಲಿನ ಕೆ. ಕೊಟ್ರೇಶ್ ಅವರ ಸುಗಮ ಸಂಗೀತ ಗಾಯನ ಪ್ರೇಕ್ಷಕರ ಮನಸೂರೆಗೊಂಡಿತು.
ಬಳ್ಳಾರಿಯ ಎಸ್.ಕೆ.ಆರ್. ಜಿಲಾನಿ ಭಾಷ ಮತ್ತು ಸಂಗಡಿಗರು ನಡೆಸಿಕೊಟ್ಟ ಸಮೂಹ ನೃತ್ಯ ಹಾಗೂ ಹುಲುಗಪ್ಪ ಎಸ್.ಎಂ. ಅವರ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಬಳ್ಳಾರಿಯ ರವೀಂದ್ರ ಮಲ್ಲಯ್ಯ ಹಿರೇಮಠ ಅವರಿಂದ ಕಥಾ ಕೀರ್ತನೆ ಮೂಡಿಬಂದರೆ, ಸಿರುಗುಪ್ಪದ ಜಿ. ವೀರನಗೌಡ ಮತ್ತು ಸಂಗಡಿಗರು ಅಭಿನಯಿಸಿದ ‘ಪಾಂಡು ಸುತರ ವನವಾಸ’ ಬಯಲಾಟ ಪ್ರೇಕ್ಷಕರನ್ನು ಆಕರ್ಷಿಸಿತು.
ಸಿರುಗುಪ್ಪ ಭಾಗದ ಕಲಾವಿದರಾದ ಎಂ. ನಾಗರಾಜ ಮತ್ತು ಸಂಗಡಿಗರ ತಾಷಾರಂಡೋಲ್, ಹಳೇಕೋಟೆಯ ಅಂಬಣ್ಣ ಮತ್ತು ಸಂಗಡಿಗರ ಹಗಲುವೇಷ ಹಾಗೂ ಎ. ನಾಗರಾಜ ಮತ್ತು ಸಂಗಡಿಗರ ನಂದಿಧ್ವಜ ಪ್ರದರ್ಶನಗಳು ಸಮಾರಂಭದ ಸಂಭ್ರಮವನ್ನು ಇಮ್ಮಡಿಗೊಳಿಸಿದವು.
ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಈ ಸಾಂಸ್ಕೃತಿಕ ವೈಭವಕ್ಕೆ ಸಭಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಮಾರಂಭದ ಭವ್ಯ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ತಾಲೂಕಿನ ಗಣ್ಯರು, ಕಲಾವಿದರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.