ಗದಗ 24: ಮುಂಬರುವ ಮುಂಗಾರು ಹಂಗಾಮಿಗೆ ಜಿಲ್ಲೆಯ ರೈತರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ರಸಗೊಬ್ಬರ ಪೂರೈಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ 2026-27 ನೇ ಸಾಲಿನ ಜಿಲ್ಲಾ ಮಟ್ಟದ ಕೃಷಿ ಪರಿಕರಗಳ ಉಸ್ತುವಾರಿ ಸಮಿತಿ ಮತ್ತು ಜಾಗೃತಿ ಸಮಿತಿ ಸಭೆ ಹಾಗೂ ಮುಂಗಾರು ಹಂಗಾಮಿನ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಸಹಕಾರಿ ಸಂಘಗಳ ( PACS ) ಮೂಲಕ ರಸಗೊಬ್ಬರ ಮಾರಾಟವನ್ನು ಚುರುಕುಗೊಳಿಸಬೇಕು. ರಸಗೊಬ್ಬರ ಪೂರೈಕೆಯ ಸರಪಳಿಯಲ್ಲಿ ಯಾವುದೇ ವಿಳಂಬವಾಗಬಾರದು. ಕಂಪನಿಗಳಿಂದ ರಸಗೊಬ್ಬರ ಬಿಡುಗಡೆಯಾದ ತಕ್ಷಣ, ಅದು ಪಾಯಿಂಟ್ ಆಫ್ ಸೇಲ್ (POS ) ಯಂತ್ರಗಳಲ್ಲಿ ಸರಿಯಾಗಿ ದಾಖಲಾಗುತ್ತಿದೆಯೇ ಎಂಬುದನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದರು.
ತುರ್ತು ಸಂದರ್ಭಗಳಿಗಾಗಿ ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದ ರಸಗೊಬ್ಬರವನ್ನು ಬಫರ್ ಸ್ಟಾಕ್ ಆಗಿ ಕಾಯ್ದಿರಿಸಲು ಮತ್ತು ಅದರ ಸಕಾಲಿಕ ವಿತರಣೆಗೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಸಕಾಲದಲ್ಲಿ ಗೊಬ್ಬರ ಸಿಗುವಂತೆ ವ್ಯವಸ್ಥೆ ಮಾಡಬೇಕೆಂದರು.
ಜಿಲ್ಲೆಗೆ ಸರಬರಾಜಾಗುವ ರಸಗೊಬ್ಬರವನ್ನು ಕಂಪನಿಗಳು ಡೀಲರ್‌ಗಳಿಗೆ ಹಂಚಿಕೆ ಮಾಡುವಾಗ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವ ಡೀಲರ್‌ಗೆ ಎಷ್ಟು ಪ್ರಮಾಣದ ಗೊಬ್ಬರ ಹಂಚಿಕೆಯಾಗಿದೆ ಎಂಬ ಮಾಹಿತಿಯನ್ನು ಕೃಷಿ ಇಲಾಖೆಗೆ ಮುಂಚಿತವಾಗಿ ಸಲ್ಲಿಸಬೇಕು. ಕೆಲವು ಡೀಲರ್‌ಗಳು ಅಥವಾ ಮಧ್ಯವರ್ತಿಗಳು ರಸಗೊಬ್ಬರವನ್ನು ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವುದನ್ನು ತಡೆಗಟ್ಟಲು ಕೃಷಿ ಇಲಾಖೆ ಅಧಿಕಾರಿಗಳು ನಿರಂತರ ನಿಗಾವಹಿಸಬೇಕು ಎಂದು ಹೇಳಿದರು.
ಜಿಲ್ಲೆಯ ರೈತರಿಗೆ ವಿಮಾ ಸೌಲಭ್ಯಗಳನ್ನು ತಲುಪಿಸುವಲ್ಲಿ ಕೃಷಿ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ಮುಂಗಾರು ಹಂಗಾಮಿನ ಬೆಳೆ ಹಾನಿ ಸಂದರ್ಭದಲ್ಲಿ ರೈತರಿಗೆ ಸರಿಯಾದ ಪರಿಹಾರ ಸಿಗುವಂತೆ ವಿಮಾ ಕಂಪನಿಗಳೊಂದಿಗೆ ಸಮನ್ವಯ ಸಾಧಿಸಲು ಸೂಚಿಸಿದರು.
ಕೇವಲ ಯುರಿಯಾ ಅಥವಾ ಡಿಎಪಿ ಗೊಬ್ಬರಗಳ ಮೇಲೆ ಅವಲಂಬಿತವಾಗದೆ, ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ 'ಕಾಂಪ್ಲೆಕ್ಸ್' ಗೊಬ್ಬರಗಳನ್ನು ಬಳಸುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಫೀಲ್ಡ್ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕೇವಲ ಅಂಕಿ-ಅAಶಗಳನ್ನು ನೀಡದೆ, ವಾಸ್ತವದಲ್ಲಿ ರೈತರಿಗೆ ತಲುಪಿರುವ ಸೌಲಭ್ಯಗಳ ಬಗ್ಗೆ ನಿಗಾ ವಹಿಸಬೇಕು. ಯಾವುದೇ ಹಂತದಲ್ಲಿ ಭ್ರಷ್ಟಾಚಾರ ಅಥವಾ ನಿರ್ಲಕ್ಷ್ಯ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ಚೇತನಾ ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗುವ (ಏಪ್ರಿಲ್-ಸಪ್ಟಂಬರ) ವರೆಗೆ ಒಟ್ಟು 67536 ಮೆಟ್ರಿಕ್ ಟನ್ ರಸಗೊಬ್ಬರಗಳ ಅಗತ್ಯವಿದೆ. ಈಗಾಗಲೇ ಸುಮಾರು 13842 ಮೆಟ್ರಿಕ್ ಟನ್ ರಸಗೊಬ್ಬರಗಳನ್ನು ಜಿಲ್ಲೆಯಲ್ಲಿ ದಾಸ್ತಾನು ಮಾಡಲಾಗಿದೆ. ಮುಂಗಾರು ಹಂಗಾಮಿಗೆ ಒಟ್ಟಾರೆಯಾಗಿ ಯೂರಿಯಾ ರಸಗೊಬ್ಬರ-28531 ಮೆಟ್ರಿಕ್ ಟನ್ ಬೇಡಿಕೆ ಇದ್ದು, ಅದರಲ್ಲಿ ಈಗಾಗಲೇ 4492 ಮೆಟ್ರಿಕ್ ಟನ್ ದಾಸ್ತಾನು ಮಾಡಲಾಗಿದೆ. ಮುಂಗಾರು ಚಟುವಟಿಕೆ ಪ್ರಾರಂಭವಾಗುತ್ತಲೇ ಹಂತ ಹಂತವಾಗಿ ಸಕಾಲಕ್ಕೆ ಯೂರಿಯಾ ರಸಗೊಬ್ಬರಗಳ ಸರಬರಾಜಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯ ರೈತರು ಯಾರೊಬ್ಬರ ಅನಗತ್ಯ ವದಂತಿಗೆ ಕಿವಿಗೊಡದೆ ಅಗತ್ಯವಿರುವಷ್ಟು ಖರೀದಿಸಬಹುದು. ಕೆ-ಕಿಸಾನ್ App ಮೂಲಕ ರಸಗೊಬ್ಬರಗಳ ಖರೀದಿಗೆ ಕ್ರಮವಹಿಸಲಾಗಿದ್ದು ಕೃಷಿ ಪರಿಕರ ಮಾರಾಟಗಾರರ ಮಳಿಗೆಗಳ ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ರೈತರು ಆಯಾ ಬೆಳೆಗೆ ಶಿಫಾರಸ್ಸುಮಾಡಿದ ಪ್ರಮಾಣದೊಂದಿಗೆ, ವೈಜ್ಞಾನಿಕವಾಗಿಯೇ ರಸಾಯನಿಕ ಗೊಬ್ಬರ ಬಳಸುವಂತೆ ಜಿಲ್ಲಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಯೂರಿಯಾ ವಿತರಣೆಗೆ "ಕೆ-ಕಿಸಾನ್ ತಂತ್ರಾಂಶ' ಜಿಲ್ಲೆಯ ರೈತರು ಯೂರಿಯಾ ರಸಗೊಬ್ಬರಗಳನ್ನು ಖರೀದಿಸಲು ಎಫ್.ಐ.ಡಿ ಹೊಂದಿರುವುದು ಕಡ್ಡಾಯವಾಗಿದೆ. 2026-27 ರ ಮುಂಗಾರು ಹಂಗಾಮಿನಿಂದ ಹೊಸ ನಿಯಮ ಜಾರಿಗೆ ಬರಲಿದೆ. ರೈತರ ಜಮೀನಿನ ವಿಸ್ತೀರ್ಣ ಬೆಳೆದ ಬೆಳೆಯ ಅನುಗುಣವಾಗಿ ರಸಗೊಬ್ಬರದ ಅಗತ್ಯತೆಗೆ ಅನುಗುಣವಾಗಿ ಮಾತ್ರ ಕೆ-ಕಿಸಾನ್ ತಂತ್ರಾAಶದ ಮೂಲಕ ಮಾತ್ರ ರಸಗೊಬ್ಬರಗಳನ್ನು ವಿತರಿಸಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಡಿ.ವೈ.ಎಸ್.ಪಿ ಮಹಾಂತೇಶ್ ಸಜ್ಜನ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ವಿವಿಧ ರಸಗೊಬ್ಬರ ಕಂಪನಿಗಳ ಜಿಲ್ಲಾ ಪ್ರತಿನಿಧಿಗಳು ಹಾಗೂ ತಾಲ್ಲೂಕು ಮಟ್ಟದ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.
