ಬಳ್ಳಾರಿ, ಸೆ.16:: ತಾಲೂಕಿನ ಹಿರೇಹಡ್ಲಿಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವು ಭಾವಪೂರ್ಣ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಗಂಗೇಶ್, 20 ವರ್ಷಗಳಿಂದ ನನ್ನ ಹೃದಯದಲ್ಲಿ ಈ ಗ್ರಾಮ ಮತ್ತು ಇಲ್ಲಿನ ವಿದ್ಯಾರ್ಥಿಗಳ ಬಗ್ಗೆ ಅಪಾರ ಅಭಿಮಾನವಿದೆ. ಗ್ರಾಮಸ್ಥರು ಹಾಗೂ ಪೋಷಕರ ಸಹಕಾರದಿಂದಲೇ ಇಲ್ಲಿ ಹೈಸ್ಕೂಲ್ ಆರಂಭಿಸಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಕೆಟ್ಟ ಚಟಗಳಿಂದ ದೂರವಿದ್ದು, ಸದ್ಗುಣಗಳನ್ನು ಬೆಳೆಸಿಕೊಂಡು ಜಿಲ್ಲೆಗೆ ಕೀರ್ತಿ ತರಬೇಕು. ಪೋಷಕರು ಮಕ್ಕಳನ್ನು ಕೇವಲ ಆಸ್ತಿಯನ್ನಾಗಿ ಮಾಡದೆ, ಸನ್ನಡತೆಯ ಸಂಪತ್ತನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಶಂಭುಲಿಂಗಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ತಂದೆ-ತಾಯಿ, ಶಿಕ್ಷಕರು ಹಾಗೂ ಕಷ್ಟಕಾಲದಲ್ಲಿ ನೆರವಾದವರನ್ನು ಎಂದಿಗೂ ಮರೆಯಬಾರದು. ಶಿಕ್ಷಣ ವ್ಯಾಪಾರೀಕರಣಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಬದುಕಿನ ನೈಜ ಮೌಲ್ಯಗಳನ್ನು ಕಲಿಸುತ್ತಿವೆ. ಶಿಕ್ಷಕ ವೃತ್ತಿಗೆ ನಿವೃತ್ತಿ ಎಂಬುದಿಲ್ಲ; ಶಿಕ್ಷಕರಿಗೆ ಸದಾ ಗೌರವವಿದೆ ಎಂದರು.
ನಿವೃತ್ತ ಶಿಕ್ಷಕ ಸುಂಕಪ್ಪ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇರಬೇಕು. ಪೋಷಕರು ಕೂಲಿ ಕೆಲಸ ಮಾಡಿಯಾದರೂ ಮಕ್ಕಳಿಗೆ ಅಕ್ಷರ ಜ್ಞಾನ ನೀಡಬೇಕು. ಹಿಂದೆ ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳ ದಾಖಲಾತಿ ಮಾಡಿಸಿ, ಆರನೇ ತರಗತಿ ಆರಂಭಿಸಲು ನಡೆಸಿದ ಶ್ರಮ ಇಂದು ಸಾರ್ಥಕವಾಗಿದೆ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.
ಉಪನ್ಯಾಸಕ ರಾಮು.ಕೆ ಮಾತನಾಡಿ, ಹೆತ್ತ ತಾಯಿ ಹಾಗೂ ಹೊತ್ತ ನೆಲವನ್ನು ಎಂದಿಗೂ ಮರೆಯಬಾರದು. ಹಳೆಯ ವಿದ್ಯಾರ್ಥಿಗಳ ಒಗ್ಗಟ್ಟಿನ ಫಲವಾಗಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಶಿಕ್ಷಣದ ಮೂಲಕ ಅಂದಿನ ಹಡ್ಲಿಗಿಗೂ ಇಂದಿನ ಹಡ್ಲಿಗಿಗೂ ಸಾಕಷ್ಟು ಬದಲಾವಣೆ ಸಾಧ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ವಿಧೇಯತೆ ಹಾಗೂ ವಿನಯಶೀಲತೆ ಬೆಳೆಸಬೇಕು ಎಂದರು.
ಶಿಕ್ಷಕ ಪ್ರಭುರಾಜ್ ಮಾತನಾಡಿ, ಹಿರೇಹಡ್ಲಿಗಿಯ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಹಾಗೂ ಸಾಧಿಸುವ ಛಲವನ್ನು ಬೆಳೆಸಲು ನಿರಂತರ ಪ್ರೋತ್ಸಾಹ ನೀಡಲಾಗಿದೆ ಎಂದರು.
ಶಿಕ್ಷಕಿ ತಿಪ್ಪಮ್ಮ ಮಾತನಾಡಿ, ಇಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದರೂ 30 ವರ್ಷ ಕೆಲಸ ಮಾಡಿದ ಅನುಭವವಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ, ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಬೇಕು. ಇದರಿಂದ ಅವರ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿದ್ದ ನಿವೃತ್ತ ಶಿಕ್ಷಕ ಕೆ.ಎಂ. ಮಹೇಶ್ವರಯ್ಯ ಅವರು ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳ ನಡುವಿನ ಆತ್ಮೀಯ ಬಾಂಧವ್ಯವನ್ನು ಸ್ಮರಿಸಿ ಭಾವುಕರಾದರು.
ಕಾರ್ಯಕ್ರಮದ ಅಂಗವಾಗಿ ಶಿಕ್ಷಕರನ್ನು ಹೂಗುಚ್ಚ ನೀಡಿ ಗೌರವಿಸಿ ಮೆರವಣಿಗೆ ನಡೆಸಲಾಯಿತು. ಶಿಕ್ಷಕರಾದ ಶ್ರೀನಿವಾಸ, ಕೊಟ್ರಪ್ಪ, ಚಂದ್ರಶೇಖರ್, ರಾಮಚಂದ್ರಪ್ಪ, ಹಾಲೇಶ್, ನಾಗಭೂಷಣ್, ನಾಗನಗೌಡ ಹಾಗೂ ಅಬ್ದುಲ್ ಕಲಾಂ ಅವರು ತಮ್ಮ ಸೇವಾ ಅವಧಿಯ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಚಂದ್ರಶೇಖರ.ಸಿ ನಿರೂಪಿಸಿದರು. ಐರಾವತ ಮಣಿಗಿ ಸ್ವಾಗತಿಸಿದರು. ಶಾಲೆಯ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.