ಮಹಾಲಿಂಗಪುರ: ಮಹಾಲಿಂಗಪುರದಿಂದ ಸಂಗಾನಟ್ಟಿ, ಮದಭಾವಿ ಮತ್ತು ಮಾರಾಪುರ ಗ್ರಾಮಗಳಿಗೆ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾರಿಗೆ ಸೌಕರ್ಯದ ಕೊರತೆಯಿಂದ ಉಂಟಾಗುತ್ತಿದ್ದ ತೊಂದರೆಯನ್ನು ಗಮನಿಸಿ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸದಾಗಿ ಸಂಜೆ ೪:೧೫ ಗಂಟೆಗೆ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಈ ಕ್ರಮಕ್ಕೆ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ದಿನಾಂಕ ೦೮-೦೬-೨೦೨೬ ರಂದು ಈ ಗ್ರಾಮಗಳ ವಿದ್ಯಾರ್ಥಿಗಳು ಸಾರಿಗೆ ಸೌಕರ್ಯವಿಲ್ಲದೆ ನಿತ್ಯ ಅನುಭವಿಸುತ್ತಿದ್ದ ತೊಂದರೆಯನ್ನು ಅರಿತ ಸಮಾಜ ಸೇವಕರಾದ ಸುರೇಶ್ ತಳಗಡೆ ಮತ್ತು ಅಶೋಕ್ ತಳಗಡೆಯವರು, ತಕ್ಷಣವೇ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ವಿದ್ಯಾ ನಾಯಕ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಡಿಪೋ ಮ್ಯಾನೇಜರ್ ಅವರು, ಪ್ರತಿದಿನ ಸಂಜೆ ೪:೧೫ಕ್ಕೆ ಸಂಗಾನಟ್ಟಿ, ಮದಭಾವಿ ಮತ್ತು ಮಾರಾಪುರ ಗ್ರಾಮಗಳಿಗೆ ಬಸ್ ಸಂಚಾರವನ್ನು ಆರಂಭಿಸಿದ್ದಾರೆ.
ಈ ನೂತನ ಸಾರಿಗೆ ಸೌಲಭ್ಯದ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಬಸ್ಸಿಗೆ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಲಕ್ಷ್ಮಣ ನಾವಿ, ಅಶೋಕ್ ತಳಗಡೆ, ಸುರೇಶ ತಳಗಡೆ, ಶಿವನಿಂಗ ಚಂದರಗಿ, ಆನಂದ ತಳಗಡೆ, ರವಿ ರಂಜನಿಗಿ, ಶಾಲಾ ಶಿಕ್ಷಕರು,ಗ್ರಾಮಸ್ಥರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಕಾಲದಲ್ಲಿ ಬಸ್ ಸೌಲಭ್ಯ ಕಲ್ಪಿಸಿದ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ವಿದ್ಯಾ ನಾಯಕ್ ಅವರಿಗೆ ಗ್ರಾಮಸ್ಥರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.