ಧಾರವಾಡ : ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವರ ದೈನಂದಿನ ಶ್ರಮವನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರೂ, ಅದು ಮಾನವರ ಪರಸ್ಪರ ಸಂಬಂಧ ಮತ್ತು ಪ್ರಕೃತಿಯೊಂದಿಗೆ ಇರುವ ಸಂಬಂಧವನ್ನು ಕೂಡ ಬದಲಾಯಿಸಿದೆ ಎಂದು ಇಸ್ರೋದ ನಿಕಟ ಪೂರ್ವ ಅಧ್ಯಕ್ಷರಾದ ಎ.ಎಸ್.ಕಿರಣಕುಮಾರ ಅಭಿಪ್ರಾಯಪಟ್ಟರು.
ಅವರು ಕವಿವಿ ಗಾಂಧಿ ಭವನದಲ್ಲಿ ಆಯೋಜಿಸಿದ ಕರ್ನಾಟಕ ವಿಶ್ವವಿದ್ಯಾಲಯದ 75ನೇ ವಾರ್ಷಿಕ ಘಟಿಕೋತ್ಸವ ಭಾಷಣ ಮಾಡಿ ಮಾತನಾಡಿದರು.
ಇಂದು ಮಾನವ ಭೂಮಿಯ ಹೊರಗೂ ಹೋಗುವ ಸಾಮರ್ಥ್ಯವನ್ನು ಹೊಂದಿದ್ದು, ಹತ್ತಿರದ ಗ್ರಹಗಳಲ್ಲಿ ವಾಸಸ್ಥಾನ ನಿರ್ಮಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಬದಲಾವಣೆಯ ವೇಗ ನಿಧಾನವಾಗಿದ್ದಾಗ, ಜನರು ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತಿತ್ತು. ಆದರೆ ಈಗ ವೇಗವಾದ ಬದಲಾವಣೆಗಳು ವ್ಯಕ್ತಿಗಳು, ಗುಂಪುಗಳು, ಸಮುದಾಯಗಳು ಮತ್ತು ರಾಷ್ಟ್ರಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಮುಂತಾದ ಸಂಶೋಧಕರು ಸಂಶೋಧನೆಯಿಂದ ವಿವರಿಸಿದ್ದಾರೆ ಎಂದರು.
ನೀವು ಈಗ ನಿಮ್ಮ ಜೀವನದ ಒಂದು ಮಹತ್ವದ ಹಂತಕ್ಕೆ ಪ್ರವೇಶಿಸುತ್ತಿದ್ದೀರಿ. ಇದು ನೀವು ಇತ್ತೀಚೆಗೆ ಅನುಭವಿಸಿದ್ದ ಸುವ್ಯವಸ್ಥಿತ, ನಿಯಂತ್ರಿತ ಮತ್ತು ಸಂಘಟಿತ ಪರಿಸರದಿಂದ ಹೆಚ್ಚು ಅಸ್ಥಿರ, ಸವಾಲಿನ ಪರಿಸ್ಥಿತಿಗಳಿಗೆ ಸಾಗುವ ಹಂತವಾಗಿದೆ. ಈ ಹಂತದಲ್ಲಿ ನೀವು ಎದುರಿಸುವ ಪರಿಸ್ಥಿತಿಗಳನ್ನು ಚಾತುರ್ಯ ಮತ್ತು ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಅಗತ್ಯವಾಗುತ್ತದೆ ಎಂದರು.
ನೀವು ಪಡೆದಿರುವ ಶಿಕ್ಷಣವು ಈ ಹಂತಕ್ಕೆ ನಿಮ್ಮನ್ನು ಸಿದ್ಧಗೊಳಿಸಬೇಕೆಂದು ನಿರೀಕ್ಷಿಸಲಾಗಿದೆ. ಆದರೆ, ನಿಮ್ಮ ಜೀವನಯಾತ್ರೆಯನ್ನು ಯಶಸ್ವಿಯಾಗಿ ಸಾಗಿಸುವ ನಿಮ್ಮ ಅನುಭವವೇ ಆ ಗುರಿ ಸಾಧನೆಯಾಗಿದೆಯೇ ಇಲ್ಲವೇ ಎಂಬುದನ್ನು ತೋರಿಸುತ್ತದೆ. ಎಂದ ಅವರು ವಾಸ್ತವಿಕವಾಗಿ ನೋಡಿದರೆ, ಭಾರತದಲ್ಲಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿಯೂ ಶಿಕ್ಷಣವನ್ನು ಸಮರ್ಪಕವಾಗಿ ಒದಗಿಸುವುದು ಒಂದು ದೊಡ್ಡ ಸವಾಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನವು ಸಮಾಜದಲ್ಲಿ ತರುತ್ತಿರುವ ವೇಗವಾದ ಬದಲಾವಣೆಗಳನ್ನು ಗಮನಿಸಿದರೆ, ಮುಂದಿನ ತಲೆಮಾರುಗಳಿಗೆ ಸಮರ್ಪಕ ಶಿಕ್ಷಣ ನೀಡುವುದು ದಿನೇ ದಿನೇ ಕಷ್ಟವಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.
ಮಾನವರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಹೊಸ ಸಾಧನಗಳನ್ನು ಬಳಸುವ ಸ್ವಾಭಾವಿಕ ಆಸೆಯನ್ನು ಹೊಂದಿದ್ದಾರೆ. ಆದರೆ, ಈ ವೇಗವಾದ ಮತ್ತು ಅಸ್ಥಿರ ಬದಲಾವಣೆಗಳ ಪರಿಣಾಮವಾಗಿ ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಒತ್ತಡ ಉಂಟಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯುವ ಮಾನವ ಪ್ರಯತ್ನ ನಿಲ್ಲದು. ಆದರೆ ಅದರ ಪರಿಣಾಮಗಳನ್ನು ಎದುರಿಸುವ ಸಾಮರ್ಥ್ಯವನ್ನು ವ್ಯಕ್ತಿಗಳು ಮತ್ತು ಸಮಾಜಗಳು ಬೆಳೆಸಿಕೊಳ್ಳಬೇಕು.
ಶತಮಾನಗಳ ಕಾಲ ನಡೆದ ಹೊರಗಿನ ಆಳ್ವಿಕೆ ನಮ್ಮ ದೇಶದ ಮೌಲ್ಯ ವ್ಯವಸ್ಥೆ ಮತ್ತು ಜೀವನಶೈಲಿ ಮೇಲೆ ಪ್ರಭಾವ ಬೀರಿದೆ. ಸ್ವಾತಂತ್ರ್ಯ ನಂತರ, ನಾವು ನಮ್ಮ ನಾಗರಿಕರ ಜೀವನಮಟ್ಟವನ್ನು ಸುಧಾರಿಸಲು ಸಾಕಷ್ಟು ಪ್ರಯತ್ನಿಸಿದ್ದೇವೆ ಎಂದರು.
ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದೆ. ಸ್ವಾತಂತ್ರ್ಯದ ನೂರು ವರ್ಷದಲ್ಲಿ ಭಾರತ ಮೊದಲ ಸ್ಥಾನವನ್ನು ಪಡೆಯುವ ಗುರಿಯನ್ನೂ ಹೊಂದಿದೆ. ಈ ಪ್ರಯಾಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿವೆ. ಎಂದ ಅವರು ಸಂವಹನ, ಪ್ರಸಾರ, ಹವಾಮಾನ ಮೇಲ್ವಿಚಾರಣೆ, ಸಂಪನ್ಮೂಲಗಳ ನಿರ್ವಹಣೆ, ನೇವಿಗೇಶನ್ ಮತ್ತು ವಿಪತ್ತು ನಿರ್ವಹಣೆಯಲ್ಲಿ ಅಂತರಿಕ್ಷ ತಂತ್ರಜ್ಞಾನದ ಬಳಕೆ ಅತ್ಯುತ್ತಮ ಉದಾಹರಣೆಯಾಗಿದೆ. ಅದೇ ರೀತಿ ಅಣುಶಕ್ತಿ ಅಭಿವೃದ್ಧಿ, ಕೋವಿಡ್ ಸಮಸ್ಯೆ ಎದುರಿಸುವುದು, ಡಿಜಿಟಲ್ ಗವರ್ನನ್ಸ್ ವ್ಯವಸ್ಥೆಗಳು—ಇವೆಲ್ಲವೂ ನಾವು ರಾಷ್ಟ್ರವಾಗಿ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂಬುದನ್ನು ತೋರಿಸುತ್ತವೆ ಎಂದರು.
ಪ್ರಸ್ತುತ ಲಭ್ಯವಿರುವ ತಂತ್ರಜ್ಞಾನಗಳನ್ನು ಮಾತ್ರ ಬಳಸಿಕೊಂಡು ಸಮಸ್ಯೆಗಳನ್ನು ಪರಿಹರಿಸುವುದು ಸಾಕಾಗುವುದಿಲ್ಲ. ಅದು ನಿಮಗೆ ಕೆಲ ಅಡೆತಡೆಗಳನ್ನು ದಾಟಲು ಸಹಾಯ ಮಾಡಬಹುದು, ಆದರೆ ಇತರರಿಗಿಂತ ಹಿಂದೆ ಬೀಳುವ ಸಾಧ್ಯತೆ ಇದೆ.
ಆದ್ದರಿಂದ, ನೀವು ನಿಮ್ಮ ಜೀವನಯಾತ್ರೆಯನ್ನು ಹೇಗೆ ಸಾಗಿಸುತ್ತೀರಿ ಎಂಬುದರ ಬಗ್ಗೆ ಆತ್ಮ ವಿಮರ್ಶೆ ಮಾಡಬೇಕೋಳ್ಳಬೇಕಾಗಿದೆ ಎಂದರು.
ಈಗ ಎಲ್ಲರೂ ವಿಶ್ವದ ಅನ್ವೇಷಕರೇ ಆಗಿದ್ದಾರೆ. ಈ ಅನ್ವೇಷಣೆಯನ್ನು ಮಾಡಲು ನಿಮ್ಮಲ್ಲಿ ಇರುವ ಸಾಮರ್ಥ್ಯಗಳನ್ನು ತಿಳಿದುಕೊಳ್ಳಬೇಕು. ಮಾನವರಾಗಿ ನಮಗೆ “ASLI-Intelligence” (ನಿಜವಾದ ಬುದ್ಧಿಮತ್ತೆ), ಐದು ಜ್ಞಾನೇಂದ್ರಿಯಗಳು (Gnanendriyas), ಐದು ಕರ್ಮೇಂದ್ರಿಯಗಳು (Karmendriyas) ಮತ್ತು ಎರಡು ವಿಧದ ಸ್ಮರಣೆಗಳಿವೆ. ಈ ಎಲ್ಲವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೀವು ತಿಳಿದುಕೊಂಡರೆ, ನಿಮ್ಮ ಜೀವನಯಾತ್ರೆಯನ್ನು ಯಶಸ್ವಿಯಾಗಿ ಸಾಗಿಸುವ ನಿಮ್ಮ ಸಾಮರ್ಥ್ಯವನ್ನು ನೀವು ಸ್ವತಃ ನಿರ್ಧರಿಸಬಹುದು ಎಂದರು.
ಕುಲಪತಿಗಳ ಸ್ವಾಗತ ಭಾಷಣ: ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ ಖಾನ್ ಸ್ವಾಗತ ಭಾಷಣ ಮಾಡಿ ಮಾತನಾಡಿದ ಅವರು ಕರ್ನಾಟಕ ವಿಶ್ವವಿದ್ಯಾಲಯ ನ್ಯಾಕ್ 'ಎ' ಗ್ರೇಡ ಹೊಂದಿದ್ದು, ಶೈಕ್ಷಣಿಕವಾಗಿ ನಾವೀನ್ಯತೆ ಯನ್ನು ಹೊಂದಿದೆ. ವಿಶ್ವವಿದ್ಯಾಲಯವು ಐದು ಸಂಯೋಜಿತ ಕಾಲೇಜುಗಳನ್ನು ಹೊಂದಿದೆ. 235 ಕಾಲೇಜುಗಳು ಕವಿವಿಯ ವ್ಯಾಪ್ತಿಯ ಸಂಯೋಜನೆ.ಗೊಂಡಿವೆ. ಪ್ರತಿವರ್ಷ ಎಂಟು ಸಾವಿರ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯುತ್ತಾರೆ. ಪ್ರಸಾರಾಂಗ 45 ಪಠ್ಯ ಪುಸ್ತಕಗಳನ್ನು 10 ಇತರೆ ಶೈಕ್ಷಣಿಕ ಮೌಲ್ಯಾಧಾರಿತ ಪ್ರಕಟಣೆಗಳನ್ನು ಪ್ರಕಟಿಸಿದೆ.
ವಿಶ್ವವಿದ್ಯಾಲಯವು ದೇಶದ ಮಹನೀಯರ ಅಧ್ಯಯನ ಪೀಠಗಳನ್ನು ಹೊಂದಿದ್ದು, ಅವರ ತತ್ವ ಆದರ್ಶಗಳನ್ನು ಪ್ರಚಾರ ಪಡಿಸಿಸುತ್ತಿವೆ ಎಂದ ಅವರು.
ವಿಶ್ವವಿದ್ಯಾಲಯವು ಪರ್ಸ್,ಯು.ಪಿ.ಇ, ಮತ್ತು ಆಯ್.ಪಿ.ಎಲ್.ಎಸ್ ಸಂಶೋಧನಾ ಯೋಜನೆಗಳನ್ನು ಹೊಂದಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪಿ.ಎಮ್ ಉಷಾ ಯೋಜನೆ ಅಡಿಯಲ್ಲಿ 20 ಕೋಟಿ ರೂಪಾಯಿಗಳನ್ನು ಪಡೆದಿದೆ. ವಿಶ್ವವಿದ್ಯಾಲಯವು ಅನೇಕ ಸಂಶೋಧನೆಗಳ ಮೂಲಕ ಕೊಡುಗೆ ನೀಡುತ್ತದೆ ಎಂದರು.
ಬೆಂಗಳೂರಿನ ಡಿ.ದೇವರಾಜ ಅರಸು ಸಂಶೋಧನೆ, ಸಿ.ಎಸ್.ಐ.ಆರ್ ಮತ್ತು ರಾಜ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಕವಿವಿ ಅಂಬೇಡ್ಕರ್ ಅಧ್ಯಯನ ಪೀಠ ಹತ್ತು ಲಕ್ಷ ರೂಪಾಯಿಗಳನ್ನು ರಾಷ್ಟ್ರೀಯ ಸಮ್ಮೇಳನ ಆಯೋಜಿಸಲು ನೀಡಿದೆ ಎಂದ ಅವರು ವಿಶ್ವವಿದ್ಯಾಲಯದ ಪ್ರೊ.ಲಕ್ಷ್ಮಿ ಇನಾಮದಾರ, ಪ್ರೊ. ಎಂ.ಡೆವಿಡ್, ಬಸವರಾಜ ನಾಗೂರ, ಅವರು ತಮ್ಮ ಶೈಕ್ಷಣಿಕ ಚಟುವಟಿಕೆಗಳ ಮೂಲಕ ವಿಶೇಷ ಕೊಡುಗೆ ನೀಡಿದ್ದಾರೆ. ಕವಿವಿ ವ್ಯಾಪ್ತಿಯಲ್ಲಿ 15,200 ಎನ್.ಎಸ್.ಎಸ್ ಸ್ವಯಂ ಸೇವಕರು, 152 ಎನ್.ಎಸ್.ಎಸ್ ಘಟಕಗಳನ್ನು ಹೊಂದಿದೆ ಎಂದರು.
ಕೌಶಲ್ಯ ಭಾರತ ಮತ್ತು ವಿಕಸಿತ ಭಾರತ ಕನಸನ್ನು ನನಸಾಗಿಸಲು ಶೈಕ್ಷಣಿಕವಾಗಿ ದಾಪುಗಾಲು ಇಟ್ಟಿದೆ.
ಸ್ಟಾರ್ಟ್- ಅಪ್ ಮತ್ತು ಅನ್ವೇಷಣಾ ಹಬ್, ವಿದ್ಯಾರ್ಥಿ ಉದ್ಯಮಶೀಲತೆ ಅಂತಹ ವಿಶೇಷತೆಗಳನ್ನು ಹೊಂದಿದೆ ಎಂದ ಅವರು ವಿಶ್ವವಿದ್ಯಾಲಯವು ಹಲವಾರು ವಿಭಾಗಗಳು ಸಂಶೋಧನಾ ಒಪ್ಪಂದ (MoU) ಹೊಂದಿದೆ. ವಿದ್ಯಾರ್ಥಿಗಳಿಗೆ ಇಂಟರ್ನಶಿಫ್ ತರಬೇತಿ, ವಿದ್ಯಾರ್ಥಿಗಳ ಮತ್ತು ಪ್ರಾಧ್ಯಾಪಕರ ವಿನಿಮಯ
ಮತ್ತು ಜಂಟಿ ಸಂಶೋಧನಾ ಒಡಂಬಡಿಕೆಯನ್ನು ಹೊಂದಿದೆ ಎಂದರು.
ರಾಜ್ಯ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ ಮಾತನಾಡಿ ಕರ್ನಾಟಕ ವಿಶ್ವವಿದ್ಯಾಲಯವು ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿದೆ. ದ.ರಾ.ಬೇಂದ್ರೆ, ವಿ.ಕೃ.ಗೋಕಾಕ, ಗಿರೀಶ ಕಾರ್ನಾಡ ಮತ್ತು ಗಂಗೂಬಾಯಿ ಹಾನಗಲ್ ಅವರು ಧಾರವಾಡದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಅವರು ಕರ್ನಾಟಕ ವಿಶ್ವವಿದ್ಯಾಲಯವು ಪಿಂಚಣಿ ಸೇರಿದಂತೆ ಅನೇಕ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದೆ ಶೇಕಡಾ 70% ರಷ್ಟು ಪಿಂಚಣಿ ನೀಡಲು ಸರಕಾರ ನೀಡಲಾಗು ಚಿಂತನೆ ನಡೆದಿದೆ ಈ ವರ್ಷದಲ್ಲಿ ಬಿ.ಕಾಂ.ಲಾಜಿಸ್ಟಿಕ್ಸ್ ವಿದ್ಯಾರ್ಥಿಗಳಿಗೆ ಹೊರ ದೇಶಗಳಿಗೆ ಕಳಿಸುವ ಯೋಜನೆ ಹಾಕಿ ಹಾಕಿಕೊಂಡಿದೆ ಜೂನ್ ತಿಂಗಳಲ್ಲಿ ಸ್ಕೌಟ್ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಇಂಗ್ಲೆಂಡಗೆ ಕಳುಹಿಸಲಾಗುವುದು
ಅಜಿಂ ಪ್ರೇಮಜಿ ಫೌಂಡೇಶನ್ ಸಹಾಯದಿಂದ ವಿದ್ಯಾರ್ಥಿನಿಯರಿಗೆ ಮದುವೆ ಆಗುವ ವರೆಗೆ ಉಚಿತ ಶಿಕ್ಷಣದ ಜೊತೆಗೆ ಶಿಷ್ಯವೇತನ ನೀಡಲಾಗುವ ಯೋಜನೆ ರೂಪಿಸಿದೆ.ಪ್ರತಿವರ್ಷ ಮೂರು ವಿದ್ಯಾರ್ಥಿನಿಯರಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ನೀಡುವ ಯೋಜನೆ ಇದೆ ಉನ್ನತ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಅನೇಕ ಉತ್ತಮ ಯೋಜನೆಗಳನ್ನು ಹಾಕಿಕೊಂಡಿದೆ ಎಂದರು. ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳಸಿಕೊಳ್ಳಬೇಕು ಎಂದರು.
ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ ಚಂದ ಗೆಹ್ಲೊಟ್ ಮಾತನಾಡಿ ಕಂಡ ಕನಸನ್ನು ನನಸು ಮಾಡಲು ಕಠಿಣ ಪರಿಶ್ರಮದಿಂದ ಪ್ರಯತ್ನಿಸಿ ಎಂದ ಅವರು ಭಾರತದ ಉಜ್ಚಲ ಭವಿಷ್ಯದಲ್ಲಿ ಯುವ ಸಮೂಹದ ಪಾತ್ರ ಬಹಳ ಇದೆ. ಜೀವನದ ಹೊಸ ಅಧ್ಯಾಯವನ್ನು ಪ್ರಾರಂಬಿಸಿದ್ದಿರಿ ತಂದೆ ತಾಯಿ ಅವರ ಶ್ರಮ ತ್ಯಾಗದಿಂದ ಇಂದು ನೀವು ಶಿಕ್ಷಣ ಪಡೆದಿದ್ದಿರಿ. ಅದ್ದರಿಂದ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಡಿಜಿಟಲ್ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಭಾರತ ಜಗತ್ತಿನಲ್ಲಿ ಮೂಂಚುಣಿಯಲ್ಲಿ ಇದೆ ದೇಶದ ಅಭಿವೃದ್ಧಿಯಲ್ಲಿ ಯುವ ಸಮೂಹದ ಪಾತ್ರ ವಹಿಸಿದೆ. ಅಸಫಲತೆಯು ಜೀವನದ ಒಂದು ಭಾಗವಾಗಿದ್ದು, ಅಸಫಲತೆಯಿಂದ ಸಫಲತೆಯಿಂದ ಮುನ್ನಡೆಯಿರಿ
ಗೌರವ ಡಾಕ್ಟರೇಟ್ ಪದಾನ : ರಾಜ್ಯಪಾಲರಾದ ಥಾವರ ಚಂದ ಹ್ಲೋಟ್ ಅವರು ಶಿಕ್ಷಣ, ಆಡಳಿತ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ದುಡಿದ ಮಹನೀಯರಿಗೆ ಕರ್ನಾಟಕ ವಿಶ್ವವಿದ್ಯಾಲಯವು 75 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶಿಕ್ಷಣ ತಜ್ಞ, ಪ್ರೊ.ಅಚ್ಯುತ ಸಾಮಂತ, ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರಾದ ಜಿ.ಎಸ್.ಸಂಗ್ರೇಶಿ, ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್ ಸ್ಥಾಪಕರಾದ ಜಿತೇಂದ್ರ ಡಿ. ಮಜೆಥಿಯಾ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದರು.
ಸ್ನಾತಕ ಮತ್ತು ಸ್ನಾತಕೋತ್ತರ ವಿಷಯಗಳಲ್ಲಿ ಚಿನ್ನದ ಪದಕಗಳನ್ನು ಪಡೆದವರು: ಕುಮಟಾದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನ ಶ್ವೇತಾ ಭಟ್ ಅವರು ಬಿ.ಎಸ್ಸಿ, ಪದವಿಯಲ್ಲಿ 7 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಅಂಕೋಲಾದ ಕೆ.ಎಲ್.ಇ ಬಿ.ಎಡ್ ಕಾಲೇಜಿನ ಸುಲಕ್ಷಾ ನಾಯ್ಕ ಅವರು ಬಿ.ಎಡ್ ಪದವಿಯಲ್ಲಿ 5 ಪದಕಗಳನ್ನು ಪಡೆದಿದ್ದಾರೆ.
ಭಟ್ಕಳ ಅಂಜುಮನ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಶ್ರೇಯಾಸ್ ಅವರು ಸ್ನಾತಕೋತ್ತರ ಕನ್ನಡ ವಿಷಯದಲ್ಲಿ 11 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಕವಿವಿ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ಆದಿತ್ಯ ಯಲಿಗಾರ 11 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕವಿವಿ ಸ್ನಾತಕೋತ್ತರ ರಾಜ್ಯಶಾಸ್ತ್ರ ವಿಭಾಗದ ಪ್ರಣವ್ ಕರ್ಜಿಗಿಮಠ ಅವರು ರಾಜ್ಯ ಶಾಸ್ತ್ರದಲ್ಲಿ 7 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕವಿವಿ ಸ್ನಾತಕೋತ್ತರ ಸಮಾಜಶಾಸ್ತ್ರ ವಿಷಯದಲ್ಲಿ ಸಮೀನಾ ಕರ್ನೂಲ್ 7 ಚಿನ್ನದ ಪದಕಗಳನ್ನು ಪಡೆದಿದ್ದು, ಕವಿವಿ ಸ್ನಾತಕೋತ್ತರ ಗಣಿತಶಾಸ್ತ್ರ ವಿಷಯದಲ್ಲಿ ಸಿಂಧು ಸುರೇಬಾನ ಅವರು 10 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಜೀವರಸಾಯನ ಶಾಸ್ತ್ರದಲ್ಲಿ 8 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕವಿವಿ ಸ್ನಾತಕೋತ್ತರ ರಸಾಯನಶಾಸ್ತ್ರ ವಿಷಯದಲ್ಲಿ ನಮ್ರತಾ ಸಿನ್ನೂರ ಅವರು 6ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕವಿವಿ ಸ್ನಾತಕೋತ್ತರ ರಸಾಯನಶಾಸ್ತ್ರ ವಿಷಯದಲ್ಲಿ ವೈಭವಿ ಪಂಡಿತ ಅವರು 5 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕವಿವಿ ಸ್ನಾತಕೋತ್ತರ ಪ್ರಾಣಿಶಾಸ್ತ್ರ ವಿಷಯದಲ್ಲಿ ತ್ಯಾಯಿನಿ 8 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕವಿವಿ ಸ್ನಾತಕೋತ್ತರ ಭೂಗೋಳ ಶಾಸ್ತ್ರ ವಿಷಯದಲ್ಲಿ ಪ್ರೀತಿ ರಾಣಿ ಅವರು 5 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಕವಿವಿ ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಮಾಲಾ ಮಾಡಳ್ಳಿ ಅವರು 8 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಡಾ.ಡಿ.ಸಿ.ಪಾವಟೆ ಡೈಮಂಡ್ ಜ್ಯೂಬ್ಲಿ ಶಿಷ್ಯವೇತನ, ಮತ್ತು ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿವಿಧ ಶಿಷ್ಯವೇತನಗಳನ್ನು, ಪಾರಿತೋಷಕಗಳನ್ನು ಪ್ರದಾನ ಮಾಡಲಾಯಿತು.
ಪದವಿ ಪಡೆದವರ ವಿವರ: ಈ ಘಟಿಕೋತ್ಸವದಲ್ಲಿ ೨೭೦ ಪ್ರಶಸ್ತಿಗಳನ್ನು ಮಾಡಲಾಗುವದು ಅದರಲ್ಲಿ ೧೧೩ ವಿದ್ಯಾರ್ಥಿಗಳು ಉಪಸ್ಥಿತಿಯಲ್ಲಿ ಸುವರ್ಣ ಪದಕವನ್ನು ಪಡೆಯಲಿದ್ದಾರೆ. ೫೭ ವಿದ್ಯಾರ್ಥಿಗಳು ಪಾರಿತೋಷಕಗಳನ್ನು ಉಪಸ್ಥಿತಿಯಲ್ಲಿ ಪಡೆಯಲಿದ್ದಾರೆ.೭೮ ವಿದ್ಯಾರ್ಥಿಗಳು ಶಿಷ್ಯವೇತನ ಪಡೆಯಲಿದ್ದಾರೆ. ಇನ್ನೂ ೬೯ ವಿದ್ಯಾರ್ಥಿಗಳು ರ‍್ಯಾಂಕ್‌ಗಳನ್ನು ಪಡೆದರು ಈ ಸಂದರ್ಭದಲ್ಲಿ ೨೫೨ ಅಭ್ಯರ್ಥಿಗಳು ಪಿ.ಎಚ್.ಡಿ ಪದವಿ ಪಡೆದರು.ಅದರಲ್ಲಿ 172 ಪುರಷರು ಮತ್ತು 80 ಮಹಿಳೆಯರಿದ್ದಾರೆ.