ಬಳ್ಳಾರಿ, ಜೂ.17: ಕಳೆದ ಎರೆಡು ದಿನಗಳಿಂದ ಇಲ್ಲಿನ ಬಸವಭವನದಲ್ಲಿ ನಡೆಯುತ್ತಿರುವ ಗದ್ದಿಕೇರಿ-ನಂದೀಪುರದ ಚರಂತಪ್ಪಜ್ಜ ಸ್ವಾಮಿಗಳ 22ನೇ ಸ್ಮರಣೋತ್ಸವದ ಎರಡನೇ ದಿನವಾದ ನಿನ್ನೆ ಸಂಜೆ. ವಿವಿಧ ಮಠಾಧೀಶರ ಸಾನಿಧ್ತದಲ್ಲಿ ನಡೆದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿರಿಯ ಸಂಶೋಧಕ ಡಾ.ಸಿ. ಶಿವಕುಮಾರ ಸ್ವಾಮಿಗಳ 'ವಚನಾನುಸಂಧಾನ' ಕೃತಿ ಲೋಕಾರ್ಪಣೆ ಮಾಡಲಾಯ್ತು.
ಕೃತಿ ಕುರಿತು ಮಾತನಾಡಿದವರು, ಕೃತಿಯಲ್ಲಿ ಬರುವ ಶಿವದೀಕ್ಷೆ, ಲಿಂಗದೀಕ್ಷೆ, ಭಸ್ಮ, ರುದ್ರಾಕ್ಷಿ, ಪಂಚಾಚಾರ, ಷಟ್ಸ್ಥಲ, ಲಿಂಗಾಂಗ ಸಾಮರಸ್ಯ ಹಾಗೂ ಸಮಾಧಿ ಸಂಸ್ಕಾರ ಕುರಿತು ಬರೆದಿರುವ ಲೇಖನಗಳ ಮಹತ್ವ ಕತಿಳಿಸಿದರು. ಉಪನ್ಯಾಸಕ ಆಮಾತಿ ಬಸವರಾಜ್ ಅವರು 'ಸಕ್ಕರೆ ಕರೆಡೇಶನವರ ಮರಿಕಲ್ಯಾಣದ ಪರಿಕಲ್ಪನೆ' ಕುರಿತು ವಿಶೇಷ ಉಪನ್ಯಾಸ ನೀಡಿ, ಸಕ್ಕರೆ ಕರೆಡೀಶರ ಸಮಾಜಸೇವೆ, ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಸೇವೆ ಹಾಗೂ ಜಿಲ್ಲೆಯ ಅಭಿವೃದ್ಧಿ ನೆಲೆಯಲ್ಲಿ ಅವರು ಕೈಗೊಂಡ ಕಾರ್ಯಗಳ ಕುರಿತು ತಿಳಿಸಿದರು.
ನಂದಿಪುರ ಪುಣ್ಯಕ್ಷೇತ್ರದ ಡಾ.ಮಹೇಶ್ವರಸ್ವಾಮಿ, ಬೆಟ್ಟದೂರು ಪ್ರಭುಲಿಂಗೇಶ್ವರ ಮಠದ ಮಹಾದೇವ ದೇವಸ್ವಾಮಿ, ಜಂಗಮ ಹೊಸಹಳ್ಳಿ ಪುರವರ್ಗ ಮಠದ ಅಜಾತ ಶಂಭುಲಿಂಗ ಶಿವಾಚಾರ್ಯಸ್ವಾಮಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಚನಾನು ಸಂಧಾನ ಕೃತಿಯ ಲೇಖಕ, ಹಿರಿಯ ಸಂಶೋಧಕ ಡಾ.ಸಿ. ಶಿವಕುಮಾರಸ್ವಾಮಿ, 579 ಕೃತಿಗಳ ಲೇಖಕ ಎಸ್.ವಿ. ಪಾಟೀಲ್ ಗುಂಡೂರ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿ ರುದ್ರಪ್ಪ, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಪಲ್ಲೇದ ಪಂಪಾಪತೆಪ್ಪ, ಎರಿಸ್ವಾಮಿ ಬೂದಿಹಾಳುಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ, ಮಠಂ ನಂದೀಶ, ಮಸೀದಿಪುರದ ಸಿದ್ದರಾಮನಗೌಡ ಭಾಗವಹಿಸಿದ್ದರು.
ಸಿದ್ಧರಾಮ ಕಲ್ಮಠ ಪ್ರಾಸ್ತಾವಿಕ ಮಾತನಾಡಿದರು. ಲೇಖಕಿ ಡಾ.ಎಚ್.ಎಂ.ಉಮಾ ಕಾರ್ಯಕ್ರಮ ನಿರ್ವಹಿಸಿದರು. ಚರಂತಪ್ಪಜ್ಜನವರ ಲೀಲೆಗಳ ಕುರಿತು ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಮತ್ತವರ ತಂಡ ಹಾಡಿತು.