ಮೂಲತಃ ಹಾಸನದವರೇ ಆದ, ಹಾಸನದಲ್ಲಿಯೇ ನೆಲೆಸಿರುವ, ವೃತ್ತಿಯಲ್ಲಿ ವಕೀಲೆಯಾಗಿರುವ ಚಿಂತಕಿ ಬಾನು ಮುಷ್ತಾಕ್ ಅವರು ಪತ್ರಕರ್ತೆಯಾಗಿಯೂ ಗಮನ ಸೆಳೆದವರು. ವೃತ್ತಿ ಬದುಕಿನ ಜೊತೆಗೆ ಸಾಹಿತ್ಯಿಕವಾಗಿಯೂ ಸಾಕಷ್ಟು ಕೆಲಸ ಮಾಡಿರುವ ಇವರಿಗೆ ಸಾಕಷ್ಟು ಪ್ರಶಸ್ತಿಗಳು ಒಲಿದು ಬಂದಿವೆ. ಬಾನು ಮುಷ್ತಾಕ್ ಅವರ ‘ಹಸೀನ’ ಮತ್ತು ಇತರೆ ಕತೆಗಳನ್ನು ಪತ್ರಕರ್ತೆ ದೀಪಾ ಭಕ್ತಿಯವರು ಇಂಗ್ಲಿಷ್ಗೆ ಅನುವಾದಿಸಿದ್ದು, ‘ಹಾರ್ಟ್ ಲ್ಯಾಂಪ್’ ಕೃತಿ ಇದೀಗ ಪ್ರತಿಷ್ಟಿತ ಬೂಕರ್ ಅವಾರ್ಡ್ ಹೊಸ್ತಿಲಿಗೆ ಬಂದು ನಿಂತಿದೆ. ಕಳೆದ ವರ್ಷ ಇದೇ ಕೃತಿಗೆ ಪ್ರತಿಷ್ಠಿತ ಪೆನ್ ಅವಾರ್ಡ್ ಕೂಡ ಇವರಿಗೆ ಲಭಿಸಿತ್ತು.
ಇಂಗ್ಲೆಂಡ್ನಲ್ಲಿ ಕೊಡಮಾಡುವ ಈ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಆರಂಭದಲ್ಲಿ 154 ಕೃತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ತೀರ್ಪುಗಾರರು ಪರಾಮರ್ಶೆ, ಅಧ್ಯಯನದ ಬಳಿಕ ಅಂತಿಮವಾಗಿ 13 ಕೃತಿಗಳನ್ನು ಲಾಂಗ್ ಲಿಸ್ಟ್ ಮಾಡುತ್ತಾರೆ. ಅದರಲ್ಲಿ ಈ ಬಾರಿ ‘ಹಾರ್ಟ್ ಲ್ಯಾಂಪ್’ ಕೃತಿ ಕೂಡ ಸ್ಥಾನ ಪಡೆದಿದೆ.