ರಾಮದುರ್ಗ: ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ತಾಲೂಕು ಕನಕ ನೌಕರರ ಸಂಘದ ಸಹಯೋಗದಲ್ಲಿ ಮೇ.೨೪ ರಂದು ಬೆಳಿಗ್ಗೆ ೧೦ಕ್ಕೆ ಸ್ಥಳೀಯ ಪ್ರಗತಿ ಕಲ್ಯಾಣ ಮಂಟಪದಲ್ಲಿ ಕನಕಶ್ರೀ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಪಡಿಯಪ್ಪ ಕ್ವಾರಿ ತಿಳಿಸಿದರು.
ಸ್ಥಳೀಯ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕ ಪಡೆದ ಕುಡುಬ ಸಮಾಜದ ವಿದ್ಯಾರ್ಥಿಗಳಿಗೆ ಕನಕಶ್ರೀ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿ ನಕಲು ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು.
ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ತಾಲೂಕಿನ ಪ್ರಥಮ ಸ್ಥಾನ ಪಡೆದ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ಹಾಗೂ ನಗದು ಪುರಸ್ಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಧಾರವಾಡದ ಮನಸೂರ ಮಠದ ಬಸವರಾಜ ದೇವರು ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಧಾರವಾಡದ ಸ್ಪರ್ಧಾ ಜೀನಿಯಸ್ ಅಕಾಡೆಮಿಯ ಐ.ಎ.ಎಸ್ ಹಾಗೂ ಕೆ.ಎ.ಎಸ್ ತರಬೇತುದಾರ ಸಿದ್ದಣ್ಣ ದಳವಾಯಿ ಅವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದು, ತಾಲೂಕಿನ ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಕನಕಶ್ರೀ ಪ್ರತಿಭಾ ಪುರಸ್ಕಾರದ ಹೆಚ್ಚಿನ ಮಾಹಿತಿಗೆ ಕೆ.ಎನ್. ಯಡ್ರಾಂವಿ ೯೬೬೩೧೭೪೦೧೬, ಎಂ.ಎಸ್.ಗವನ್ನವರ ೯೪೮೧೫೫೯೮೭೮ ಸಂಪರ್ಕಿಸಲು ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುರುಬ ಸಮಾಜದ ಮುಖಂಡರಾದ ಅಶೋಕ ಮೆಟಗುಡ್ಡ, ಈರಣ್ಣ ಕಾಮನ್ನವರ, ಮಲ್ಲಪ್ಪ ಸೋಮಗೊಂಡ, ಸೋಮಶೇಖರ ಸಿದ್ಲಿಂಗಪ್ಪನವರ, ಕೆಂಪಣ್ಣ ಕ್ವಾರಿ, ತಿಪ್ಪಣ್ಣ ಪೂಜಾರ, ನಾಗೇಶ ಚಂದರಗಿ, ಬಾಲನಗೌಡ ಬಾಗೋಜಿ, ಹನಮಂತಗೌಡ ಪಾಟೀಲ, ಎಂ.ಎಸ್.ಗವನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
