ಯರಗಟ್ಟಿ: ಪ್ರತಿಯೊಂದು ಭಾಷೆಯು ತನ್ನದೇ ಆದ ಸಂಸ್ಕೃತಿ ಪರಂಪರೆ ಇತಿಹಾಸವನ್ನು ಹೊಂದಿರುತ್ತದೆ ಅದರಲ್ಲಿ ಎರಡು ಸಾವಿರ ವರ್ಷಗಳಿಗೂ ಸುದೀರ್ಘ ಇತಿಹಾಸವನ್ನು ಹೊಂದಿರುವ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮನೋಹರ ಅವರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಯರಗಟ್ಟಿ ತಾಲೂಕು ಘಟಕದ ವತಿಯಿಂದ ನಿರ್ಮಲ ಕೊಚಿಂಗ್ ಸೆಂಟರ್ ಸಭಾಭವನದಲ್ಲಿ ಆಯೋಜಿಸಿದ 112ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಚಟುವಟಿಕೆಗಳು ನಮಗೆ ಪ್ರೇರಣೆಯಾಗಬೇಕು ಎಂದು ಪ್ರತಿಪಾದಿಸಿದರು.
ಮುಗಳಿಹಾಳದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ವೀರಯ್ಯ ಸುಬ್ಬಾಪುರಮಠ ಅವರು ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ಬಗೆಯನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು.
ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪರಿಷತ್ತಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಮ್ಮಣ್ಣ ಕಾಮಣ್ಣವರ ಅವರು ಮಾತನಾಡಿದರು. ರೈನಾಪುರ ಶ್ರದ್ಧಾನಂದ ಆಶ್ರಮದ ಮಾತೋಶ್ರೀ ಮುದ್ದಮ್ಮ ತಾಯಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಆರ್.ಎಲ್. ಜೂಗನವರ, ಎಸ್.ಎಸ್. ಕುರುಬಗಟ್ಟಿಮಠ, ಶಂಕರಗೌಡ ಪಾಟೀಲ, ಡಾ. ವಿಶ್ವನಾಥ್ ತಾಂವಸಿ, ಡಾ. ರಾಜಶೇಖರ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿವಕುಮಾರ ಜಕಾತಿ ನಿರೂಪಿಸಿದರು, ಬಸನಗೌಡ ಅಣ್ಣಿಗೇರಿ ಸ್ವಾಗತಿಸಿದರು, ದೇವೇಂದ್ರ ಕಮ್ಮಾರ ವಂದಿಸಿದರು.