ಬಳ್ಳಾರಿ, ಜೂ.04: ನಗರದ ಕೌಲ್ಬಜಾರ್ ಪರೋಟಮ್ಮ ಗುಡಿ ಹತ್ತಿರದ ನಿವಾಸಿ ಆಫ್ರಿನ್ ಬಾನು ಹತ್ಯೆ ಪ್ರಕರಣದಲ್ಲಿ ಪತಿ ನೂರ್ ಅಹ್ಮದ್ನನ್ನು ಪೊಲೀಸರು ಬಂಧಿಸಿದ್ದಾರೆ.
ಎಂಟು ತಿಂಗಳು ಮಗುವನ್ನು ಹೊಂದಿದ್ದ ಅಫ್ರಿನ್ ಬಾನು ಅವರನ್ನು ಆಕೆಯ ಪತಿ ನೂರ್ ಅಹಮ್ಮದ್ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ಇವರಿಬ್ಬರು ಪ್ರೀತಿಸಿ ಮದುವೆ ಆಗಿದ್ದರು.
ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಆಫ್ರಿನ್ ಬಾನು ಗಂಡನ ಮನೆ ಬಿಟ್ಟು ಕೆಲಕಾಲದಿಂದ ತವರು ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ಮೇ 21ರಂದು ತನ್ನ ಹುಟ್ಟುಹಬ್ಬದ ನೆಪದಲ್ಲಿ ಪತ್ನಿಯ ಮನೆಗೆ ಬಂದಿದ್ದ ನೂರ್ ಅಹ್ಮದ್, ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾನೆ. ಬಳಿಕ ಪತ್ನಿಯನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದಾನೆ. ಆದರೆ ಆಫ್ರಿನ್ ಬಾನುಳನ್ನು ತಿರುಗಿ ಮನೆಗೆ ಕಳಿಸಿಲ್ಲ. ಆಗ ತವರು ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ ತಾಲೂಕಿನ ವೇಣಿವೀರಾಪುರದ ಜಮೀನು ಒಂದರಲ್ಲಿ ಆಫ್ರಿನ್ ಬಾನು ಅವರ ಮೃತದೇಹ ಪತ್ತೆಯಾಗಿದೆ. ಪ್ರಕರಣದ ತನಿಖೆಯ ವೇಳೆ ದೊರೆತ ಸಾಕ್ಷ್ಯಾಧಾರಗಳ ಆಧಾರದಲ್ಲಿ ನೂರ್ ಅಹ್ಮದ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತಳ ಕುಟುಂಬಸ್ಥರು ಪ್ರಕರಣದಲ್ಲಿ ಪತಿ ಮಾತ್ರವಲ್ಲದೆ ಆತನ ಕುಟುಂಬ ಸದಸ್ಯರು ಆಫ್ರಿನ್ ಬಾನುಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ,
