ಬಳ್ಳಾರಿ: 18:..ಇದೇ ಆಗಸ್ಟ್ ೧೧ ರಿಂದ ತುಂಗಭದ್ರ ಹೆಚ್ ಎಲ್ ಸಿ, ಎಲ್ ಎಲ್ ಸಿ ಕಾಲುವೆಗಳಿಗೆ ಬಿಡಲಾಗಿರುವ ನೀರಿನ ಹರಿವಿನ ಮಟ್ಟವನ್ನು ಹೆಚ್ಚಿಸುವ ಮೂಲಕ ಕರ್ನಾಟಕದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಭಾರತೀಯ ಜನತಾ ಪಾರ್ಟಿ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷರಾದ ಎಸ್.ಗುರುಲಿಂಗನಗೌಡ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಸಿಎಂ ಸೇರಿದಂತೆ ತುಂಗಭದ್ರಾ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿಗಳು, ಟಿ.ಬಿ.ಡ್ಯಾಂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸಚಿವರಾಗಿರುವ ಶಿವರಾಜ ಎಸ್.ತಂಗಡಗಿ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿರುವ ಬಿ.ನಾಗೇಂದ್ರ, ಬಳ್ಳಾರಿ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿರುವ ಅವರು, ತುಂಗಭದ್ರ ಅಣೆಕಟ್ಟಿನಿಂದ ಹೆಚ್ ಎಲ್ ಸಿ, ಎಲ್ ಎಲ್ ಸಿ ಕಾಲುವೆಗಳಿಗೆ ಪ್ರತಿ ವರ್ಷ ಆಂಧ್ರ ಮತ್ತು ಕರ್ನಾಟಕ ಪಾಲಿನ ನೀರನ್ನು ಒಟ್ಟಿಗೆ ಹರಿಸಬೇಕೆಂಬ ಕಾನೂನನ್ನು ಟಿ.ಬಿ.ಮಂಡಳಿ ಇಲ್ಲಿಯವರೆಗೂ ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿದೆ. ತುಂಗಭದ್ರ ನೀರಾವರಿ ಸಲಹಾ ಮಂಡಳಿಯ ಸಭೆಯಲ್ಲಿನ ನಿರ್ಧಾರದಂತೆ ಆಗಸ್ಟ್ ೧೧ ರಂದು ತುಂಗಭದ್ರ ಆಣೆಕಟ್ಟಿನಿಂದ ಬಳ್ಳಾರಿ ಮತ್ತು ಆಂಧ್ರ ಪ್ರದೇಶದ ಕಡೆಗೆ ಹೋಗುವ ಹೆಚ್ ಎಲ್ ಸಿ ಮತ್ತು ಎಲ್ ಎಲ್ ಸಿ ಕಾಲುವೆಗಳಿಗೆ ನೀರು ಹರಿಯಲು ಆರಂಭಿಸಿದೆ. ಹಾಗೆ ಹರಿಯುವ ನೀರು ಕೇವಲ ೩.೫ ಅಡಿ ಇದ್ದು, ಬಳ್ಳಾರಿ ಜಿಲ್ಲೆಯ ಭಾಗದ ರೈತರ ಹೊಲಗಳಿಗೆ ನೀರು ಹರಿಸುವ ಡಿ.ಪಿ.ಗಳು ೪-೫ ಅಡಿ ಮೇಲ್ಭಾಗದಲ್ಲಿವೆ. ಇದರಿಂದ ರೈತರ ಗದ್ದೆಗಳಿಗೆ ಹಾಲಿ ಬಿಟ್ಟಿರುವ ನೀರಿನ ಉಪಯೋಗ ಪಡೆದುಕೊಳ್ಳಲು ಆಗದೆ ಜಲಾಶಯದ ನೀರು ವ್ಯರ್ಥವಾಗಿ ಪೋಲಾಗುತ್ತಿದೆ.
ಈಗಾಗಲೇ ಮುಂಗಾರು ಮಳೆ ಶೇ ೫೦% ಕೊರತೆಯಾಗಿರುವುದರಿಂದ ಸಾಕಷ್ಟು ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿಲ್ಲ. ಈ ಹಿಂದೆ ಹಿಂಗಾರು ಹಂಗಾಮಿನಲ್ಲಿ ತುಂಗಭದ್ರ ಆಣೆಕಟ್ಟಿನ ಗೇಟುಗಳ ನಿರ್ಮಾಣ ಕಾಮಗಾರಿಯಿಂದಾಗಿ ನೀರನ್ನು ಬಿಟ್ಟಿರಲಿಲ್ಲ. ಇದರಿಂದಾಗಿಯೂ ಸಹ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ ಎಲ್ ಸಿ, ಎಲ್ ಎಲ್ ಸಿ ಕಾಲುವೆಗಳಿಗೆ ನೀರಿನಿಂದ ಸುಮಾರು ೨.೮೧ (೩) ಲಕ್ಷ ಎಕರೆ ರೈತರು ಮೇಲೆ ಅವಲಂಬಿತರಾಗಿದ್ದು, ಕೃಷಿ ಜೀವನದ ಜೊತೆಗೆ ದೇಶಕ್ಕೆ ಆಹಾರ ಭದ್ರತೆಯನ್ನೂ ನೀಡುತ್ತಿದ್ದಾರೆ.
ಈಗ ಕಾಲುವೆಗಳಿಗೆ ಪೂರೈಸುತ್ತಿರುವ ಜಲಾಶಯದ ನೀರಿನ ಹರಿವಿನ ಪ್ರಮಾಣದ ಮಟ್ಟವು ಕೃಷಿ ಚಟುವಟಿಕೆಗೆ ಪೂರಕವಾಗಿಲ್ಲ. ಈ ಕೂಡಲೇ ಪ್ರತಿ ವರ್ಷದಂತೆ ಟಿ.ಬಿ. ಡ್ಯಾಮ್ ಬೋರ್ಡಿನ ನಿಯಮದಂತೆ ಕರ್ನಾಟಕ ಮತ್ತು ಆಂಧ್ರ ಪಾಲಿನ ನೀರನ್ನು ಏಕ ಕಾಲಕ್ಕೆ ಹರಿಸಿದಂತೆ ಈ ವರ್ಷವೂ ಕೂಡ ಭರ್ತಿಯಾಗಿ ಪೂರ್ತಿ ಪ್ರಮಾಣದ ನೀರನ್ನು ತಕ್ಷಣವೇ ಕಾಲುವೆಗೆ ಹರಿಸಲು ಕ್ರಮ ಕೈಗೊಳ್ಳಬೇಕು.
ಆಗಸ್ಟ್ ೧೧ ರಂದು ನಡೆದ ಐಸಿಸಿ ಸಭೆಯ ನಿರ್ಧಾರದಂತೆ ರೈತರಿಗೆ ಸಿಗಬೇಕಾದ ಪೂರ್ಣ ಪ್ರಮಾಣದ ನೀರನ್ನು ಹೆಚ್ ಎಲ್ ಸಿ, ಎಲ್ ಎಲ್ ಸಿ ಮುಖ್ಯ ಕಾಲುವೆಗೆ ತಕ್ಷಣವೇ ಹರಿಸಿ, ಎಲ್ಲಾ ಕೊನೆಯ ಭಾಗದ ಡಿ.ಪಿ.ಗಳಿಗೂ ನೀರು ತಲುಪಿಸಬೇಕು. ಹೆಚ್ ಎಲ್ ಸಿ ವಿತರಣಾ ಕಾಲುವೆ ಸಂಖ್ಯೆ: ೧೪ರ ವ್ಯಾಪ್ತಿಯ ಎಲ್ಲಾ ಉಪ-ಕಾಲುವೆಗಳ ಮುಖ್ಯ ಭಾಗಕ್ಕೆ ಯುದ್ಧೋಪಾದಿಯಲ್ಲಿ ತಾತ್ಕಲಿಕವಾಗಿಯಾದರೂ ಆನ್/ಆಫ್ ಗೇಟ್ ಗಳನ್ನು ಅಳವಡಿಸಿ ನೀರಿನ ಸಮಾನ ಹಂಚಿಕೆಗೆ ವ್ಯವಸ್ಥೆ ಮಾಡಬೇಕು. ತುಂಗಭದ್ರ ಜಲಾಶಯದ ನದಿ ಮತ್ತು ವೇದಾವತಿ ದಡದ ರೈತರಿಗೆ, ಜಾನುವಾರುಗಳಿಗೆ ಮತ್ತು ಜನರಿಗೆ ಕುಡಿಯುವ ನೀರನ್ನು ಜಲಾಶಯದ ಮುಖಾಂತರ ನೀರು ಹರಿಸಬೇಕು. ಒಂದು ವೇಳೆ ಹೆಚ್ ಎಲ್ ಸಿ ಮತ್ತು ಎಲ್ ಎಲ್ ಸಿ ಹಾಗೂ ವೇದಾವತಿ ನದಿ ಭಾಗದ ರೈತರಿಗೆ ಪೂರ್ಣ ಪ್ರಮಾಣದ ನೀರನ್ನು ಹರಿಸದೇ ಇದ್ದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆಂದು ಎಸ್. ಗುರುಲಿಂಗನಗೌಡ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಧುರೀಣರಾದ ಗುತ್ತಿಗನೂರು ವಿರೂಪಾಕ್ಷಗೌಡ, ಐನಾಥ್ ರೆಡ್ಡಿ, ರೈತರಾದ ಹೆಚ್.ವೀರನಗೌಡ, ಎಂ.ಆರ್.ಬಸವನಗೌಡ, ಲೋಕೇಶ, ಭೋಜರಾಜ, ಹೆಚ್.ಆರ್.ಮಲ್ಲಿಗೌಡ ಇನ್ನಿತರರು ಇದ್ದರು.
-