ಬಳ್ಳಾರಿ: 04:..jನಗರದಲ್ಲಿ ಬುಧವಾರ ಸಂಜೆ ಮತ್ತೆ ಗುಡುಗು-ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿತು. ಸತತ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ರಸ್ತೆ ಹಾಗೂ ಅಂಡರ್ಪಾಸ್ಗಳಲ್ಲಿ ಮಳೆನೀರು ನಿಂತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಯಿತು.
ಮಂಗಳವಾರ ಸಂಜೆ ಬೀಸಿದ ಭಾರೀ ಗಾಳಿ ಹಾಗೂ ಗುಡುಗು ಸಹಿತ ಮಳೆಗೆ ನಗರದ ಹಲವೆಡೆ ಗಿಡ-ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದು ನಾಗರಿಕರು ತತ್ತರಿಸಿದ್ದರು. ಈ ಆತಂಕ ದೂರಾಗುವ ಮುನ್ನವೇ, ಇಂದು ಬುಧವಾರವೂ ಮತ್ತೆ ವರುಣನ ಆರ್ಭಟ ಮುಂದುವರಿಯಿತು.
ಶಾಲೆ-ಕಾಲೇಜುಗಳಿಂದ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ವ್ಯಾಪಾರಿಗಳು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ನಗರದ ಪ್ರಮುಖ ರಸ್ತೆಗಳು, ವಿವಿಧ ಅಂಡರ್ಪಾಸ್ಗಳು, ಶಾಲಾ-ಕಾಲೇಜು ಮೈದಾನಗಳು, ಉದ್ಯಾನವನಗಳು ಹಾಗೂ ಸರ್ಕಾರಿ ಕಚೇರಿಗಳ ಪ್ರಾಂಗಣಗಳು ಜಲಾವೃತಗೊಂಡಿದ್ದವು.
ಧಾರಾಕಾರ ಮಳೆಯ ಹೊಡೆತಕ್ಕೆ ರಸ್ತೆಗಳು ಭಾಗಶಃ ಹಾನಿಗೊಳಗಾಗಿದ್ದು, ನಡುರಸ್ತೆಯಲ್ಲೇ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರು ಅನಗತ್ಯ ತೊಂದರೆ ಅನುಭವಿಸುವಂತಾಗಿದೆ.
ವಿದ್ಯುತ್ ಇಲ್ಲದೇ ಜನ ಹೈರಾಣ: ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಬಳ್ಳಾರಿ ನಗರದಲ್ಲಿ ಹತ್ತಾರು ಮರಳು ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದು. ಹೀಗಾಗಿ ವಿದ್ಯುತ್ ತಂತಿ ತುಂಡರಿಸಿ, ಪರಿವರ್ತಕಗಳು ಹಾಳಾಗಿ ನಗರದಲ್ಲಿ ರಾತ್ರಿ ಇಡೀ ವಿದ್ಯುತ್ ವ್ಯತ್ಯಯವಾಯಿತು. ಹೀಗಾಗಿ ಸಾರ್ವಜನಿಕರು ರಾತ್ರಿ ಇಡೀ ಪರಿತಪಿಸುವಂತಾಯಿತು.
ಸಂಡೂರು ಮಳೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಗುಡುಗು, ಸಿಡಿಲು ಸಹಿತ ಕೆಲಕಾಲ ಸಾಧಾರಣ ಮಳೆ ಸುರಿಯಿತು.
ತಾಲ್ಲೂಕಿನ ಜೋಗ, ತಾಳೂರು, ಬನ್ನಿಹಟ್ಟಿ, ತಾರಾನಗರ, ನಾಗಲಾಪುರ, ಲಿಂಗದಹಳ್ಳಿ, ಮುರಾರಿಪುರ ಗ್ರಾಮ ಸೇರಿದಂತೆ ಇತರೆ ಗ್ರಾಮಗಳಲ್ಲಿ ಮಳೆ ಸುರಿಯಿತು.
