ಬಳ್ಳಾರಿ, ಮೇ 11.: ನಗರದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ನೆರವಾಗಲು ಗೀತಾ ಸೇವಿ ಸಂಸ್ಕಾರ ಮತ್ತು ವೆಲ್ಫೇರ್ ಟ್ರಸ್ಟ್ ವತಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಉಚಿತ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಗಳನ್ನು (ಏiosಞs) ಇಂದು ಯಶಸ್ವಿಯಾಗಿ ಅಳವಡಿಸಲಾಯಿತು.
ಟ್ರಸ್ಟ್ನ ಈ ಮೊದಲ ಬೃಹತ್ ಸಮಾಜಮುಖಿ ಯೋಜನೆಯು ಇಂದು ಅಧಿಕೃತವಾಗಿ ಚಾಲನೆಗೊಂಡಿತು. ಪ್ರಮುಖವಾಗಿ ಹಳೇ ಬಸ್ ನಿಲ್ದಾಣದ ಎದುರು ಹಾಗೂ ಗುಗ್ಗಿಹಟ್ಟಿ ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ಈ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಬಾಯಾರಿದ ಹಾದಿಹೋಕರಿಗೆ ಹಾಗೂ ಕಾರ್ಮಿಕರಿಗೆ ಇದು ಆಸರೆಯಾಗಿದೆ.
ಈ ಸಂದರ್ಭದಲ್ಲಿ ಟ್ರಸ್ಟ್ನ ಶ್ರೀ ಶ್ರೀನಿವಾಸ ದೇವಳೆ ಮತ್ತು ಶ್ರೀ ಜಡೆಪ್ಪ ನವರು ಮಾತನಾಡಿ , "ಸೇವೆಯೇ ಪರಮ ಧರ್ಮ ಎಂಬ ಧ್ಯೇಯದೊಂದಿಗೆ ನಮ್ಮ ಟ್ರಸ್ಟ್ ಈ ಕಾರ್ಯಕ್ಕೆ ಮುಂದಾಗಿದೆ. ಈ ಬೇಸಿಗೆ ಮುಗಿಯುವವರೆಗೂ ಅಂದರೆ ಮೇ 25 ರವರೆಗೆ ಪ್ರತಿದಿನ ಈ ಶುದ್ಧ ನೀರಿನ ವಿತರಣೆ ನಿರಂತರವಾಗಿ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು," ಎಂದು ತಿಳಿಸಿದರು.
ನೀರು ವಿತರಿಸುವ ಸ್ಥಳಗಳು-ಹಳೇ ಬಸ್ ನಿಲ್ದಾಣದ ಎದುರು, ಗುಗ್ಗಿರಹಟ್ಟಿ ಮತ್ತು ನಗರದ ಇತರೆ ಪ್ರಮುಖ ಕೇಂದ್ರಗಳು. ಹಾಗೂ ಇಂದಿನಿಂದ ಆರಂಭಗೊಂಡು ಮೇ 25 ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ..