ಬಳ್ಳಾರಿ, ಮೇ.08: ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿ ಮಾಡುವುದನ್ನು ಬಿಳಂಬ ಮಾಡುತ್ತಿರುವುದರ ವಿರುದ್ದ ಇಂದು ಹೊಸ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಮಿತಿಯ ಸಂಚಾಲಕ ಜಗದೀಶ್ ನೇಮಕಲ್ ಈ ವೇಳೆ ಮಾತನಾಡುತ್ತಾ, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಿಂದಲೂ ನಿರಂತರ ಉದ್ಯೋಗಾಕಾಂಕ್ಷಿಗಳು ಹಲವಾರು ಮನವಿ ಪತ್ರ ಕೊಟ್ಟು ಹೋರಾಟ ನಡೆಸುತ್ತಾ ಬಂದರೂ ಸಹ ನೇಮಕಾತಿ ಪ್ರಕ್ರಿಯೆ ಒಂದಲ್ಲಾ ಒಂದು ನೆಪ ಹೇಳಿ ಮುಂದೂಡುತ್ತಾ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ.
ಉದ್ಯೋಗದ ಭರವಸೆ ಹೊತ್ತು ಕಾಯುತ್ತಿರುವ ಯುವಕರನ್ನು ನಿರಾಶೆಗೊಳಿಸುತ್ತಲೇ ಇದೆ. ಅತೀ ಶೀಘ್ರದಲ್ಲಿ ಅಂತ ಹೇಳುತ್ತಾ ಇನ್ನೂ ಈ ವರ್ಷ ಮೇ ತಿಂಗಳು ಬಂದರೂ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡುತ್ತಿಲ್ಲ ಎಂಸರು.
ಕೂಡಲೇ ಪಿ.ಸಿ. ಹೋರಾಟ ಸಮಿತಿಯ ಶಿಫಾರಸನ್ನು ಜಾರಿಗೊಳಿಸಬೇಕು, ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟಿರುವ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೂಡಲೇ ಪ್ರಾರಂಭಿಸಬೇಕು ಮತ್ತು ಕೆ.ಪಿ.ಎಸ್.ಸಿ ಭ್ರಷ್ಟಾಚಾರ ಮುಕ್ತಗೊಳಿಸಬೇಕೆಂಬ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಉದ್ಯೋಗಾಕಾಂಕ್ಷಿಗಳಾದ ಪಂಪಾಪತಿ, ಗಾದಿಲಿಂಗ ವೆಂಕಟೇಶ್, ದಾದು ಇನ್ನಿತರರು ಇದ್ದರು.