ಯರಗಟ್ಟಿ: ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಮತ್ತು ಭೂಮಿತಾಯಿ ರಕ್ಷಣಾ ಕಣ್ಗಾವಲು ಸಭೆಯನ್ನು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಮಾತಾನಾಡಿ ರೈತರು ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದ್ದು ಆದ? ರೈತರು ಸಾವಯವ ಪದ್ಧತಿ ಕೃಷಿ ಅಳವಡಿಸಿ ಭೂಮಿ ತಾಯಿಯನ್ನು ರಕ್ಷಿಸಬೇಕು, ರೈತ ಬಾಂಧವರು ಕೇವಲ ಬೆಳೆಯ ಇಳುವರಿಯನ್ನು ಮಾತ್ರ ಹೆಚ್ಚಿಸದೇ ಬೆಳೆ ಬೆಳೆಯುವಾಗ ತಗಲುವ ಖರ್ಚನ್ನು ಕೂಡ ಕಡಿಮೆ ಮಾಡುವುದರಿಂದ ಕೃಷಿಯನ್ನು ಲಾಭದಾಯಕವಾಗಿಸಬಹುದು ಮತ್ತು ಅತಿಯಾದ ಯುರಿಯಾ ಬಳಕೆ ಆಗುತ್ತಿರುವುದರಿಂದ ಪ್ರತಿ ರೈತರಿಗೆ ಪ್ರತಿ ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರವನ್ನು ಕೆ ಕಿಸಾನ್ ಯೂರಿಯಾ ವಿತರಣಾ ತಂತ್ರಾಂಶದ ಮೂಲಕವೇ ವಿತರಣೆ ಮಾಡಲಾಗುತ್ತಿದೆ ಮತ್ತು ಗೊಬ್ಬರ ಖರೀದಿಸಲು ಎಫ್.ಆಯ್.ಡಿ. ಖಡ್ಡಾಯವಾಗಿ ಹೊಂದಿರಬೇಕು.
ಒಂದು ವೇಳೆ ಎಫ್.ಆಯ್.ಡಿ. ಇಲ್ಲವಾದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಎಫ್.ಆಯ್.ಡಿ. ಮಾಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ನಂತರ ಮಾತನಾಡಿದ ಕೆವಿಕೆ ಮತ್ತಿಕೊಪ್ಪದ ಬೇಸಾಯ ಶಾಸ್ತ್ರ ವಿಭಾಗದ ವಿಜ್ಞಾನಿ ಜಿ. ಬಿ. ವಿಶ್ವನಾಥ ಅವರು ಮಾತನಾಡಿ ಬೀಜೋಪಚಾರದ ಮಹತ್ವ, ಬೀಜಮೊಳಕೆ ಪರೀಕ್ಷೆಯ ಉದ್ದೇಶ ಮತ್ತು ಸಮತೋಲಿತ ರಸಗೊಬ್ಬರ ಬಳಕೆ ಕುರಿತು ಮಾಹಿತಿ ನೀಡಿದರು.
ಬಿತ್ತನೆ ಪೂರ್ವ ಯಾವುದೇ ಬೀಜಗಳಿಗೆ ಶೀಲಿಂದ್ರನಾಶಕ, ಕೀಟನಾಶಕ ಮತ್ತು ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದ್ದಲ್ಲಿ ಬೆಳೆಗಳಿಗೆ ಮಣ್ಣಿನಿಂದ ತಗುಲುವ ರೋಗಗಳಿಂದ ರಕ್ಷಿಸಬಹುದು ಮತ್ತು ಇದರಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ತದನಂತರ ರೈತರು ತಾವು ಬೆಳೆ ಬೆಳೆಯುವ ಸಂದರ್ಭದಲ್ಲಿ ಎದುರಿಸುವ ಸಮಸ್ಯೆಗಳಾದ ಕಬ್ಬು ಬೆಳೆಯಲ್ಲಿ ಬಿಳಚಿ ಕಸ ನಿರ್ವಹಣೆ ಮತ್ತು ಗೊನ್ನೆ ಹುಳು ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡರು.
ಕೃಷಿ ಅಧಿಕಾರಿಗಳಾದ ಎಸ್. ಎಲ್. ದೇಸಾಯಿ, ಎಂ. ಜಿ. ಕಳಸಪ್ಪನವರ, ಆತ್ಮ ಸಿಬ್ಬಂದಿ ಉಮೇಶ್ ಯರಗಟ್ಟಿ, ಕೃಷಿ ಸಂಜೀವಿನಿ ಸಿಬ್ಬಂದಿ ಶ್ರವಣ ಶಿವಪೂಜಿ, ಮಂಜುನಾಥ ಮುಂಡೇಶಿ, ಮಹಾಂತೇಶ ಮಾಗುಂಡನವರ, ಪ್ರಗತಿ ಪರ ರೈತರು, ರೈತ ಮಹಿಳೆಯರು ಹಾಗೂ ಕೃಷಿ ಸಖಿಯರು ಹಾಜರಿದ್ದರು.