ನೇಸರಗಿ: ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ, ಬೆಳಗಾವಿ ಮತ್ತು ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಇವರ ಸಂಯುಕ್ತಾಶ್ರಯದಲ್ಲಿ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಕೃಷಿ ಸಖಿಯರಿಗೆ ಪರಿಸರ ಕೃಷಿ ವಿಧಾನಗಳ ಕುರಿತು ಆರು ದಿನಗಳ ಮಾಡ್ಯುಲ್ ಐದರ ತರಬೇತಿ ಕಾರ್ಯಕ್ರಮವನ್ನು ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಖಾನಾಪುರ ಮತ್ತು ಸವದತ್ತಿ ತಾಲೂಕಿನ ಕೃಷಿ ಸಖಿಯರಿಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತರಬೇತಿ ಸಂಯೋಜಕರು ಹಾಗೂ ಕೇಂದ್ರದ ಮಣ್ಣು ವಿಜ್ಞಾನಿ ಎಸ್. ಎಮ್. ವಾರದ ಅವರು ಮಾತನಾಡಿ, ಕೃಷಿ ಸಖಿ ಎಂದರೆ ವ್ಯವಸಾಯದಲ್ಲಿ ರೈತರಿಗೆ ಸಹಕಾರ ನೀಡಿ ಕೃಷಿಯನ್ನು ಲಾಭದಾಯಕವಾಗಿ ನಡೆಯುವಂತೆ ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಮಹಿಳೆಯರಿಗೆ ಕೃಷಿ ಸಖಿಯರು ಎನ್ನಬಹುದು. ಕೃಷಿಯನ್ನು ಲಾಭದಾಯಕವಾಗಿ ಮಾಡಲು ಹಾಗೂ ರೈತನ ಆದಾಯವನ್ನು ಹೆಚ್ಚಿಸಲು ರೈತರಿಗೆ ತಂತ್ರಜ್ಞಾನದ ಮಾರ್ಗದರ್ಶನ ಮಾಡುವುದು ಅವಶ್ಯಕವಾಗಿದೆ. ದಿಸೆಯಲ್ಲಿ ಕೃಷಿ ಸಖಿಯರ ವಿಸ್ತರಣಾ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಅವರಿಗೆ ರೈತ ಕ್ಷೇತ್ರ ಪಾಠಶಾಲೆಯ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡಲಾಗಿದೆ. ರೈತ ಕ್ಷೇತ್ರ ಪಾಠಶಾಲೆಯು ಪರಿಣಾಮಕಾರಿಯಾದ ವಿಸ್ತರಣಾ ಪದ್ಧತಿಯಾಗಿದ್ದು, ಈ ಪದ್ಧತಿಯನ್ನು ಕೃಷಿ ಸಖಿಯರು ಕ್ಷೇತ್ರ ಮಟ್ಟದಲ್ಲಿ ಅಳವಡಿಸುವಂತೆ ಕೃಷಿ ತಂತ್ರಜ್ಞಾನಗಳನ್ನು ತ್ವರಿತವಾಗಿ ಹಾಗೂ ಸುಲಭವಾಗಿ ರೈತರಿಗೆ ತಲುಪಿಸುವಲ್ಲಿ ಯಶಸ್ವಿಯಾಗಬೇಕೆಂದು ಸಲಹೆ ನೀಡಿದರು. ಸಂಸ್ಥೆಯು ರೈತರ ಆಶೋತ್ತರಗಳಿಗೆ ಸ್ಪಂದಿಸಿ ಕೃಷಿ ತಂತ್ರಜ್ಞಾನದ ವಿಸ್ತರಣೆಯ ಮೂಲಕ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ. ಕೃಷಿ ಸಖಿಯರು ರೈತರ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರದ ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕಸಾಧಿಸಿ ರೈತರಿಗೆ ಸೇವೆ ಒದಗಿಸಬೇಕೆಂದು ಕರೆ ನೀಡಿದರು. ಕೃಷಿ ಸಖಿಯರು ರೈತರು ಮತ್ತು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುವರು ಎಂದು ವಿವರಿಸಿದರು.
ಕಾರ್ಯಕ್ರಮದ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಕೇಂದ್ರದ ವಿಜ್ಞಾನಿಗಳಾದ
ಡಾ. ಎಸ್. ಎಸ್. ಹಿರೇಮಠ, ಜಿ. ಬಿ. ವಿಶ್ವನಾಥ, ಡಾ. ಭಾವಿನಿ ಪಾಟೀಲ ಹಾಗೂ ಡಾ. ಗುರುರಾಜ ಕೌಜಲಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೃಷಿ ಸಖಿಯರು ಸ್ವಾಗತಿಸಿ ನಿರೂಪಿಸಿದರು.