ಅಥಣಿ : ಬಡ ಮಕ್ಕಳ ಶಿಕ್ಷಣಕ್ಕೆ ಎಲ್ಲರೂ ಆಸರೆಯಾಗುವ ಅವಶ್ಯಕತೆ ಇಂದಿನ ದಿನಗಳಲ್ಲಿ ಹೆಚ್ಚಿದ್ದು, ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಎಲ್ಲತರದಿಂದಲೂ ಸಹಾಯಕ್ಕೆ ಸಿದ್ದ ಎಂದು ಎಸ್‌ಪಿ ರವೀಂದ್ರ ಗಡಾದೆ ಹೇಳೀದರು.
ತಾಲೂಕಿನ ತೆಲಸಂಗ ಗ್ರಾಮದ ಸರ್ಕಾರಿ ಕನ್ನಡ ಶಾಸಕರ ಮಾದರಿ ಶಾಲೆಯಲ್ಲಿ ಆಂತರಿಕ ಭದ್ರತಾ ವಿಭಾಗದ (ಧಾರವಾಡ ವಲಯ) ಪೊಲೀಸ್ ಅಧೀಕ್ಷಕ ರವೀಂದ್ರ ಗಡಾದೆ ಜನ್ಮದಿನದ ಪ್ರಯುಕ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ ಬಡ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಣದಿಂದ ಯಾವೊಬ್ಬ ಮಗುವೂ ವಂಚಿತರಾಗಬಾರದು. ಸಾಕ್ಷರ ಸಮಾಜದಿಂದ ಮಾತ್ರ ದೇಶದ ಉತ್ತಮ ಭವಿಷ್ಯ ಸಾಧ್ಯ, ಸಮಾಜದಲ್ಲಿ ಬದಲಾವಣೆ ತರಲು ಶಿಕ್ಷಣವೇ ಪ್ರಬಲ ಅಸ್ತ್ರವಾಗಿದೆ. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಸಮೃದ್ಧ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಬಡತನ ಎಂಬುದು ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಗ್ರಾಮಸ್ಥರು ಹಮ್ಮಿಕೊಂಡಿರುವ ಈ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಡಾ. ಆರ್.ಡಿ. ಪೂಜಾರಿ, ರಾಜಕುಮಾರ ಪರ್ನಾಕರ, ಎ.ಆರ್. ಜೋಶಿ, ಸಿದ್ದರಾಮಯ್ಯ ಪೂಜಾರಿ, ಗುರುಯ್ಯ ಮಠಪತಿ, ಬಸವರಾಜ್ ಅವಟಿ, ಡಾ. ಪ್ರಕಾಶ್ ಪರನಾಕರ್, ಶಿವಾನಂದ ಪೂಜಾರಿ, ಸಂಗಮೇಶ್ ಉಂಡೋಡಿ, ಜಗದೀಶ ಪೂಜಾರಿ, ಕಾಶಿಲಿಂಗ ಲೋಕಂಡೆ, ಭೀಮಪ್ಪಾ ಬನಗೊಂಡ, ಶ್ರವಣ ಪರ್ನಾಕರ, ರಾಜು ಹೊನಕಾಶಂಬಳೆ ಸೇರಿದಂತೆ ಅನೇಕ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.